ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಕುಡಿದು 20 ಜನರು ಮೃತಪಟ್ಟಿದ್ದು, 30 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲಕುರಿಚಿ ತಾಲ್ಲೂಕಿನ ಕರುಣಾಪುರಂ ಕಾಲೊನಿಯ ಸುಮಾರು 50 ಜನರು ಮಂಗಳವಾರ ರಾತ್ರಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ನಕಲಿ ಮದ್ಯವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಬುಧವಾರ ಮುಂಜಾನೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಸರ್ಕಾರವು ವಿಶೇಷ ವೈದ್ಯಕೀಯ ತಂಡಗಳನ್ನು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆ. ಆದರೆ, ತೀವ್ರವಾಗಿ ಅಸ್ವಸ್ಥರಾದ ರೋಗಿಗಳನ್ನು ಸೇಲಂ, ತಿರುವಣ್ಣಾಮಲೈ ಮತ್ತು ಪುದುಚೇರಿಯ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಾತಾವತ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಿದೆ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಕರಣವನ್ನು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಜಾತಾವತ್ ಸ್ಥಾನಕ್ಕೆ ಎಂ.ಎಸ್. ಪ್ರಶಾಂತ್ ನೇಮಕಗೊಂಡರೆ, ರಜತ್ ಚತುರ್ವೇದಿ ನೂತನ ಎಸ್ಪಿಯಾಗಲಿದ್ದಾರೆ.
ಅಸ್ವಸ್ಥರಾದವರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದು, ಬಂಧಿತ ಗೋವಿಂದರಾಜ್ ಅವರಿಂದ ಮದ್ಯವನ್ನು ಖರೀದಿಸಿದ್ದಾರೆ ಎಂದು ನಂಬಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.