ADVERTISEMENT

ಜೈಪುರ: ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ

ಶಸ್ತ್ರಾಸ್ತ್ರಗಳೊಂದಿಗೆ ದೇವಸ್ಥಾನದ ಮೇಲೆ ದಾಳಿ

ಪಿಟಿಐ
Published 18 ಅಕ್ಟೋಬರ್ 2024, 15:23 IST
Last Updated 18 ಅಕ್ಟೋಬರ್ 2024, 15:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೈಪುರ: ರಾಜಸ್ಥಾನದ ಜೈಪುರದಲ್ಲಿ ದೇವಸ್ಥಾನವೊಂದರಲ್ಲಿ ಆಯೋಜಿಸಲಾಗಿದ್ದ ಶರದ್‌ ಪೂರ್ಣಿಮಾ ಕಾರ್ಯಕ್ರಮದ ವೇಳೆ ಶಸ್ತ್ರಧಾರಿಗಳು ನಡೆಸಿದ ದಾಳಿಯಲ್ಲಿ ಆರ್‌ಎಸ್‌ಎಸ್‌ನ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) 10 ಜನ ಕಾರ್ಯಕರ್ತರು ಗಾಯಗೊಂಡಿದ್ದಾರೆ.  

‘ಜೈಪುರದ ಕರ್ಣಿ ವಿಹಾರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ‘ಜಾಗರಣೆ’ ಕಾರ್ಯಕ್ರಮ ನಡೆಯುತ್ತಿತ್ತು. ಇದರಿಂದ ಗದ್ದಲ ಮತ್ತು ಜನಸಂದಣಿ ಉಂಟಾಗಿ ತೊಂದರೆಯಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಇಬ್ಬರು ಸ್ಥಳೀಯ ನಿವಾಸಿಗಳು ವಾಗ್ವಾದಕ್ಕಿಳಿದರು. ನಂತರ ಚಾಕು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹೆಚ್ಚಿನ ಜನರನ್ನು ಕರೆತಂದ ಅವರು ಗುಂಪು ಕಟ್ಟಿಕೊಂಡು ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು’ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು. 

ADVERTISEMENT

‘ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ನಸೀಬ್‌ ಚೌಧರಿ ಹಾಗೂ ಆತನ ಮಗನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಘಟನೆಯನ್ನು ವಿರೋಧಿಸಿ ರಸ್ತೆಗಳನ್ನು ಬಂದ್‌ ಮಾಡಿ ಜನರು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ’ ಎಂದರು.

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ರಾಜಸ್ಥಾನದ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್ ‘ಘಟನೆ ಕುರಿತು ಉನ್ನತ ತನಿಖೆ ನಡೆಸಲಾಗುವುದು ಹಾಗೂ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.