ಡೆಹ್ರಾಡೂನ್: ಕೋವಿಡ್–19 ರಿಂದಾಗಿ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಅನಾಥನಾಗಿ ಭಿಕ್ಷಾಟನೆ ಪ್ರಾರಂಭಿಸುತ್ತಾನೆ. ಇಂತಹ ದುಸ್ಥಿತಿಯಲ್ಲಿದ್ದ 10 ವರ್ಷದ ಬಾಲಕ ಷಾಜೆಬ್, ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗುತ್ತಾನೆ.
‘ಸ್ಲಂಡಾಗ್ ಮಿಲೇನಿಯರ್’ ಚಿತ್ರವನ್ನು ನೆನಪಿಸುವ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ. ಷಾಜೆಬ್ ತಾತ ಸಾಯುವ ಮೊದಲು ತಮ್ಮ ಆಸ್ತಿಯಲ್ಲಿನ ಅರ್ಧಭಾಗವನ್ನು ಬಾಲಕನ ಹೆಸರಿಗೆ ಬರೆದಿದ್ದಾರೆ. ವಿಲ್ ಬರೆದ ಬಳಿಕ ಷಾಜೆಬ್ ಸಂಬಂಧಿಗಳು ಈತನಿಗಾಗಿ ಹುಡುಕಾಡಿದ್ದಾರೆ.
ಹಳ್ಳಿ ಹುಡುಗ ಉತ್ತರಾಖಂಡದ ಕಾಲಿಯಾರ್‌ನ ಬೀದಿಗಳಲ್ಲಿ ತಿರುಗಾಡುತ್ತಿರುವಾಗ ದೂರದ ಸಂಬಂಧಿ ಮೊಬಿನ್‌ಗೆ ಸಿಕ್ಕಿದ್ದಾನೆ. ಆತನ ಹೆಸರು, ತಾಯಿ ಹೆಸರು, ವಿಳಾಸ ಕೇಳಿ ಅವನ ಮೂಲದ ಬಗ್ಗೆ ಖಾತ್ರಿಪಡಿಸಿಕೊಂಡು ಬಳಿಕ ಆತನ ಬಾಲಕನ ತಾತನ ಕುಟುಂಬಕ್ಕೆ ವಿಷಯ ತಲುಪಿಸಿದ್ದಾನೆ. ಗುರುವಾರ ತಾತನ ಕುಟುಂಬದವರು ಷಾಜೆಬ್‌ನನ್ನು ತಾಯಿ ಹುಟ್ಟೂರಾದ ಉತ್ತರ ಪ್ರದೇಶದ ಸಾಹರನ್‌ಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಷಾಜೆಬ್‌ಗೆ ಪಿತ್ರಾರ್ಜಿತವಾದ ಮನೆ ಹಾಗೂ ಒಂದು ಎಕರೆ ಭೂಮಿ ಇದೆ.
ಬಾಲಕನ ತಾಯಿ ಇಮ್ರಾನ ಸಾಹರನ್‌ಪುರದ ಪಂಡೋಲಿ ಜಿಲ್ಲೆಯವರು. 2019ರಲ್ಲಿ ತನ್ನ ಪತಿ ಯಾಕೂಬ್ ಮರಣದ ನಂತರ ಆಕೆ ಅತ್ತೆ ಮಾವನೊಂದಿಗೆ ಜಗಳ ಮಾಡಿಕೊಂಡು ಮಗನೊಂದಿಗೆ ತವರು ಮನೆಗೆ ಮರಳಿದ್ದಾಳೆ.
ಬಳಿಕ ಕಾಲಿಯಾರ್‌ನಲ್ಲಿ ವಾಸವಾಗಿದ್ದ ಇಮ್ರಾನ, ಕೋವಿಡ್ ವೇಳೆ ಸಾವಿಗೀಡಾಗಿದ್ದು ಬಾಲಕ ಅನಾಥನಾಗಿದ್ದ. ಬಾಲಕನ ತಾತನ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಆತನ ಫೊಟೊ ಅಪ್‌ಲೋಡ್ ಮಾಡಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿತ್ತು. ಇದೀಗ ಅಜ್ಜನ ಮನೆ ಸೇರಿರುವ ಬಾಲಕನಿಗೆ ಆಸ್ತಿ, ಮನೆ ಎಲ್ಲವೂ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.