ADVERTISEMENT

ಕೋಲ್ಕತ್ತದಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಗ್ರಾಮಸ್ಥರಿಂದ ಠಾಣೆಗೆ ಬೆಂಕಿ

ಪಿಟಿಐ
Published 5 ಅಕ್ಟೋಬರ್ 2024, 10:31 IST
Last Updated 5 ಅಕ್ಟೋಬರ್ 2024, 10:31 IST
<div class="paragraphs"><p>ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಿಂದ ಆಕ್ರೋಶಗೊಂಡ ಗ್ರಾಮಸ್ಥರು 'ದಕ್ಷಿಣ 24 ಪರಗಣ'&nbsp;ಜಿಲ್ಲೆಯಲ್ಲಿ ಠಾಣೆಗೆ&nbsp;ಬೆಂಕಿ ಹಚ್ಚಿ ಹಾನಿ ಮಾಡಿರುವುದು</p></div>

ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಿಂದ ಆಕ್ರೋಶಗೊಂಡ ಗ್ರಾಮಸ್ಥರು 'ದಕ್ಷಿಣ 24 ಪರಗಣ' ಜಿಲ್ಲೆಯಲ್ಲಿ ಠಾಣೆಗೆ ಬೆಂಕಿ ಹಚ್ಚಿ ಹಾನಿ ಮಾಡಿರುವುದು

   

ಪಿಟಿಐ ಚಿತ್ರ

ಕೋಲ್ಕತ್ತ (ಪಶ್ಚಿಮ ಬಂಗಾಳ): 10 ವರ್ಷದ ಬಾಲಕಿಯೊಬ್ಬರ ಶವ 'ದಕ್ಷಿಣ 24 ಪರಗಣ' ಜಿಲ್ಲೆಯ ಜಯನಗರ ಪ್ರದೇಶದ ಹಳ್ಳಿಯೊಂದರ ನಿರ್ಜನ ಪ್ರದೇಶದಲ್ಲಿ ಶನಿವಾರ ಪತ್ತೆಯಾಗಿದೆ.

ADVERTISEMENT

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಆಕೆ ಶುಕ್ರವಾರ ಸಂಜೆಯೇ ನಾಪತ್ತೆಯಾಗಿದ್ದಳು. ದೂರು ಕೊಟ್ಟ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಬಾಲಕಿಯ ಶವವನ್ನು ಇಂದು (ಶನಿವಾರ) ಮಧ್ಯಾಹ್ನ ವಶಕ್ಕೆ ಪಡೆಯಲಾಗಿದೆ. ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್‌ ಹೊರ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಠಾಣೆ ಎದುರು ನಿಲ್ಲಿಸಿದ್ದ ಹಲವು ವಾಹನಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ, ಪೊಲೀಸರು ಆವರಣದಿಂದ ಹೊರನಡೆದಿದ್ದರು. ನಂತರ, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಗಿದೆ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

'ಬಾಲಕಿಯ ಕುಟುಂಬದವರು ಮಹಿಶ್ಮರಿ ಹೊರ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ' ಎಂದು ಸ್ಥಳೀಯರು ದೂರಿದ್ದಾರೆ. ಕೋಲ್ಕತ್ತದ ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆಯಾದ ನಂತರ ಹೇಗೆ ನಡೆದುಕೊಂಡಿದ್ದರೋ, ಅದೇ ರೀತಿ ಇಲ್ಲಿಯೂ ನಡೆದುಕೊಂಡರು ಎಂದು ಆರೋಪಿಸಿದ್ದಾರೆ.

'ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದವರಿಗೆ ಶಿಕ್ಷೆಯಾಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ದೂರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ, ಬಾಲಕಿಯನ್ನು ರಕ್ಷಿಸಬಹುದಿತ್ತು' ಎಂದು ಗಣೇಶ್‌ ದೊಲುಯ್‌ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಗ್ರಾಮಸ್ಥರ ಆರೋಪಗಳನ್ನು ಅಲ್ಲಗಳೆದಿರುವ ಪೊಲೀಸರು, ದೂರು ದಾಖಲಾಗುತ್ತಿದ್ದಂತೆ ಕ್ರಮ ಕೈಗೊಂಡಿದ್ದೆವು. ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

'ಶುಕ್ರವಾರ ರಾತ್ರಿ 9ಕ್ಕೆ ಎಫ್‌ಐಆರ್‌ ದಾಖಲಾಗಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದೆವು. ಪ್ರಾಥಮಿಕ ತನಿಖೆಯ ಭಾಗವಾಗಿ ಇಂದು ಬೆಳಿಗ್ಗೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ. ಮೃತ ಬಾಲಕಿಯ ಕುಟುಂಬದೊಂದಿಗೆ ನಾವಿದ್ದೇವೆ' ಎಂದಿದ್ದಾರೆ.

ಹಾಗೆಯೇ, 'ಪೊಲೀಸ್‌ ಹೊರಠಾಣೆಗೆ ಬೆಂಕಿ ಹಚ್ಚಿದ ಹಾಗೂ ಪ್ರಮುಖ ದಾಖಲೆಗಳನ್ನು ನಾಶ ಮಾಡಿದವರನ್ನೂ ಪತ್ತೆಹಚ್ಚಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪಕ್ಷ ಬಯಸುತ್ತದೆ. ಬಿಜೆಪಿ ಮತ್ತು ಸಿಪಿಎಂ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ
ಕುನಾಲ್‌ ಘೋಷ್‌, ಟಿಎಂಸಿ ಮುಖಂಡ
ಶಾಸಕರನ್ನೇ ಬೆನ್ನತ್ತಿದ ಗ್ರಾಮಸ್ಥರು
ಘಟನಾ ಸ್ಥಳಕ್ಕೆ ಕುಲ್‌ತಲಿ ಕ್ಷೇತ್ರದ ಟಿಎಂಸಿ ಶಾಸಕ ಗಣೇಶ್‌ ಮೊಂಡಲ್‌ ಅವರು ಭೇಟಿ ನೀಡಿದಾಗ ಸ್ಥಳೀಯರು ಆಕ್ರೋಶ ಹೊರಹಾಕಿದರು. ‘ಪೊಲೀಸರ ನಿಷ್ಕ್ರಿಯತೆ’ಯನ್ನು ಶಾಸಕರು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲವರು ಅವರನ್ನು ಬೆನ್ನು ಹತ್ತಿದ ಘಟನೆಯೂ ನಡೆಯಿತು. ಬಳಿಕ ಮಾತನಾಡಿದ ಅವರು, ‘ಘಟನೆ ನಡೆದ ಬಳಿಕ ಸ್ಥಳೀಯರಲ್ಲಿ ಮಡುಗಟ್ಟಿರುವ ಆಕ್ರೋಶದ ಬಗ್ಗೆ ಅರಿವಿದೆ. ಆದರೆ, ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು’ ಎಂದು ಮನವಿ ಮಾಡಿದರು.
ಬಿಜೆಪಿ ಆಕ್ರೋಶ– ಪ್ರತಿಭಟನೆ
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌, ‘ಟ್ಯೂಷನ್‌ನಿಂದ ಹಿಂತಿರುಗುತ್ತಿದ್ದ ಬಾಲಕಿಯನ್ನು ಹೊತ್ತೊಯ್ದು, ಅತ್ಯಾಚಾರವೆಸಗಲಾಗಿದೆ. ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಫಲವಾಗಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಕಿಡಿಕಾರಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಾಲ್ಟ್‌ಲೇಕ್‌ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು.
ಮಾತಿನ ಚಕಮಕಿ
ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಪದಮೆರ್ಹಾಟ್‌ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ವೇಳೆ ಅಲ್ಲಿಗೆ ಭೇಟಿ ನೀಡಿದ ಟಿಎಂಸಿ ಸಂಸದೆ ಪ್ರತಿಮಾ ಮೊಂಡಲ್‌ ವಿರುದ್ಧ ಸ್ಥಳೀಯರು ‘ಗೋಬ್ಯಾಕ್‌’ ಘೋಷಣೆ ಕೂಗಿದರು. ಇದಾದ ಬಳಿಕ ಬಿಜೆಪಿ ಶಾಸಕಿ ಅಗ್ನಿಮಿತ್ರಾ ಪಾಲ್‌, ಮಾಜಿ ಸಚಿವೆ ಹಾಗೂ ಸಿಪಿಎಂ ನಾಯಕಿ ಕಾಂತಿ ಗಂಗೂಲಿ, ಡಿವೈಎಫ್‌ಐ ನಾಯಕಿ ಮೀನಾಕ್ಷಿ ಮುಖರ್ಜಿ ಅವರು ಪ್ರತ್ಯೇಕವಾಗಿ ಆಸ್ಪತ್ರೆಗೆ ಭೇಟಿ ನೀಡಿದರು. ಬಾಲಕಿಯ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡದ ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕಿ ಪೌಲ್‌, ‘ಆಡಳಿತ ಪಕ್ಷದ ಹಸ್ತಕ್ಷೇಪವಿಲ್ಲದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಪ್ರಕರಣದ ಕುರಿತು ಮ್ಯಾಜಿಸ್ಟೇಟ್‌ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಬಿಜೆಪಿ ಹಾಗೂ ಸಿಪಿಎಂ ಪಕ್ಷದ ನಾಯಕರ ಬೇಡಿಕೆಯಂತೆ, ಮರಣೋತ್ತರ ಪರೀಕ್ಷೆ ನಡೆಸಲು ಬಾಲಕಿಯ ಮೃತದೇಹವನ್ನು ಕೋಲ್ಕತ್ತಕ್ಕೆ ಸಾಗಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.