ADVERTISEMENT

International Yoga Day 2024 LIVE Updates: ಯೋಗ ದಿನಾಚರಣೆ ವೇಳೆ ಮಹಿಳೆಯರೊಂದಿಗೆ ಮೋದಿ ಸೆಲ್ಫಿ

ಪ್ರಜಾವಾಣಿ ವಿಶೇಷ
Published 21 ಜೂನ್ 2024, 7:59 IST
Last Updated 21 ಜೂನ್ 2024, 7:59 IST
   

100 ವರ್ಷ ಬದುಕಲು ಯೋಗ ಸಹಕಾರಿ: ಮಧ್ಯಪ್ರದೇಶ ಸಿಎಂ

ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ಯಾವುದೇ ಸಮಸ್ಯೆಗಳು ಇಲ್ಲದೆ ನೂರು ವರ್ಷ ಬದುಕಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಧ್ಯಪ್ರದೇಶವೂ ಸೇರಿದಂತೆ ವಿಶ್ವದಾದ್ಯಂತ ಜನರು ಯೋಗ ಅಭ್ಯಾಸ ನಡೆಸಿದ್ದಾರೆ. 'ಯೋಗ ತನಗಾಗಿ ಮತ್ತು ಸಮಾಜಕ್ಕಾಗಿ' ಎಂಬುದು ಈ ಬಾರಿಯ ಥೀಮ್‌ (ವಸ್ತು ವಿಷಯ) ಆಗಿದೆ.

ಭೋಪಾಲ್‌ನಲ್ಲಿ ಸರ್ಕಾರದ ವತಿಯಿಂದ ಲಾಲ್‌ ಪರೇಡ್‌ ಮೈದಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ, ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿರುವ ಸಭಾಂಗಣದಲ್ಲಿ ಯೋಗ ದಿನ ಆಚರಿಸಲಾಯಿತು. ಯಾದವ್‌, ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿದರು.

ADVERTISEMENT

ಗಮನ ಸೆಳೆದ ಸಾಮೂಹಿಕ ಯೋಗಾಭ್ಯಾಸ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನೂರಾರು ಮಂದಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು.

ಯೋಗ ಗುರು ಪತಂಜಲಿ ಯೋಗ ಟ್ರಸ್ಟ್ ನ ಸತೀಶ್ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು- ಸಿಬ್ಬಂದಿ ಭಾಗವಹಿಸಿದ್ದರು.

ಕೊಪ್ಪಳ ಜಿಲ್ಲೆಯಾದ್ಯಂತ ಯೋಗ ಸಂಭ್ರಮ

ಹತ್ತನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೊಪ್ಪಳವೂ ಸೇರಿದಂತೆ ಜಿಲ್ಲೆಯಾದ್ಯಂತ ಯೋಗ ಹಾಗೂ ಧ್ಯಾನ ನಡೆಯಿತು.

ಕೊಪ್ಪಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹಾಗೂ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗ ಮಾಡಿದರು.

ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಯೋಗಿನಿ ಧ್ಯಾನದ ಮಹತ್ವ ಹೇಳಿಕೊಟ್ಟರು. ‘ಸ್ವಂತ ಮತ್ತು ಸಮಾಜಕ್ಕಾಗಿ ಯೋಗ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಎಲ್ಲರೂ ಇದನ್ನು ಪಾಲನೆ ಮಾಡಬೇಕು ಎಂದರು.

ತುಮಕೂರಿನಲ್ಲಿ ಕೇಂದ್ರ ಸಚಿವ ಸೋಮಣ್ಣ ಚಾಲನೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತುಮಕೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಸಾಮೂಹಿಕ ಯೋಗ ನಡೆಯಿತು.

ಜಿಲ್ಲಾ ಆಡಳಿತ, ಆಯುಷ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ನಂತರ ಮಾತನಾಡಿ, ಯೋಗ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ. ಇದು ದೇಹ, ಮನಸ್ಸನ್ನು ಒಳಗೊಂಡಿದೆ. ಮನುಷ್ಯ, ಪ್ರಕೃತಿ ಮಧ್ಯದ ಬಾಂಧವ್ಯವೇ ಯೋಗ. ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಇದೊಂದು ಬದುಕು ಬದಲಿಸುವ, ಅರಳಿಸುವ ವಿಧಾನ ಎಂದರು.

ಬೀದರ್‌ನಲ್ಲಿ ಜನಪ್ರತಿನಿಧಿಗಳು ಗೈರು

ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಮೋಡ ಮುಸುಕಿದ ತಂಪು ವಾತಾವರಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಉತ್ಸಾಹದಿಂದ ಯೋಗದ ವಿವಿಧ ಆಸನಗಳನ್ನು ಸಾಮೂಹಿಕವಾಗಿ ಮಾಡಿದರು.

ಉದ್ಘಾಟನೆ ನೆರವೇರಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಸಂಸದ ಸಾಗರ್ ಖಂಡ್ರೆ, ಸ್ಥಳೀಯ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್ ಗೈರು ಹಾಜರಾಗಿದ್ದರು.

ಜಿಲ್ಲಾಡಳಿತ, ಆಯುಷ್ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಉದ್ಘಾಟಿಸಿ, ನಿತ್ಯ ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಇರಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಡಿವೈಎಸ್ಪಿ ಶಿವನಗೌಡ ಪಾಟೀಲ ಮತ್ತಿತರರು ಹಾಜರಿದ್ದರು.

ಮಡಿಕೇರಿಯಲ್ಲಿ ಕಲಾತ್ಮಕ ಯೋಗ

ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ‌ ಬಾಲಕಿ ಸಿಂಚನಾ ಮಾಡಿದ ಕಲಾತ್ಮಕ ಯೋಗ ಗಮನ ಸೆಳೆಯಿತು.

ತಾಲ್ಲೂಕಿನ ಮದೆನಾಡು ಬಿಜಿಎಸ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಪ್ರದರ್ಶಿಸಿದ ಯೋಗ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆಯಿತು.

ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಸಿಂಚನಾ ನಾನು ಕಳೆದ 5 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವೆ. ಕಲಾತ್ಮಕ ಯೋಗವನ್ನು ಒಂದು ವರ್ಷದಿಂದ ನಿತ್ಯವೂ ಅಭ್ಯಾಸ ಮಾಡುತ್ತಿರುವೆ ಎಂದು ತಿಳಿಸಿದಳು.

ಮೋದಿ ಸೆಲ್ಫಿ...

ಶ್ರೀನಗರದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಮಹಿಳೆಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಲ್ಫಿ ಕ್ಲಿಕ್ಕಿಸಿದರು

ಯೋಗ ದಿನದಲ್ಲಿ ಸಿದ್ದರಾಮಯ್ಯ ಭಾಗಿ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದ ವತಿಯಿಂದ ತೋರಣಗಲ್‌ನ ಜಿಂದಾಲ್ ಕಂಪನಿಯಲ್ಲಿ ಆಯೋಜಿಸಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಬಳ್ಳಾರಿಯ ಹಲವು ಶಾಲೆಗಳ ವಿದ್ಯಾರ್ಥಿಗಳು, ಅಧಿಕಾರಿ ವರ್ಗದವರೂ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಶ್ರೀಲೀಲಾ ಮಾತನಾಡಿ, ಯೋಗದಿಂದ ಆರೋಗ್ಯ ಸಿಗುತ್ತದೆ. ಇಲ್ಲಿನ ಜನ ತೋರಿದ ಪ್ರೀತಿಗೆ ಋಣಿಯಾಗಿದ್ದೇನೆ ಎಂದರು.

ಅಸ್ಸಾಂ ಮುಖ್ಯಂಮತ್ರಿ ಹಿಮಂತ ಬಿಸ್ವಾ ಶರ್ಮಾ ತೇಜಪುರದಲ್ಲಿ ಯೋಗ ಮಾಡಿದರು.

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರು ಪ್ರಯಾಗರಾಜ್‌ನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು

ಯೋಗವು ಜೀವನದ ಭಾಗವಾಗಲಿ: ಮೋದಿ

ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ. ಯೋಗವು ಸಾಮರ್ಥ್ಯ, ಉತ್ತಮ ಆರೋಗ್ಯ ಮತ್ತು ಕ್ಷೇಮವನ್ನು ವೃದ್ಧಿಸುತ್ತದೆ. ಈ ವರ್ಷದ ಕಾರ್ಯಕ್ರಮಕ್ಕೆ ಶ್ರೀನಗರದಲ್ಲಿ ಪಾಲ್ಗೊಂಡಿರುವುದು ಅದ್ಭುತವೆನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯೋಗದಿಂದ ಆರೋಗ್ಯ –ದೇವೇಗೌಡ

ಪ್ರಾಚೀನ ಭಾರತೀಯ ಯೋಗ ಅಭ್ಯಾಸದಿಂದಾಗಿ ನಾನು ಆರೋಗ್ಯವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲವಾಗಿರಲು ಸಾಧ್ಯವಾಗಿದೆ. ನಾನು ಆರೋಗ್ಯಪೂರ್ಣವಾಗಿ 91 ವರ್ಷ ಪೂರೈಸಲು ಯೋಗವು ನೆರವಾಗಿದೆ ಎಂದು ಈ ಅಂತರಾಷ್ಟ್ರೀಯ ಯೋಗ ದಿನದಂದು ಹೇಳಲು ಬಯಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.

ಮಂಡ್ಯ ಸಂಸದ ದೆಹಲಿಯಲ್ಲಿ

ನವದೆಹಲಿಯ ನೋಯ್ಡಾದಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿಯ ಸಮುಚ್ಚಯದಲ್ಲಿ ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಕೇಂದ್ರದ ಭಾರೀ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಯೋಗಾಭ್ಯಾಸ ಮಾಡಿದರು.

ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಮೈಸೂರು ಅರಮನೆ ಆವರಣದಲ್ಲಿ...

ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಯೋಗಪಟುಗಳು, ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಧಾರವಾಡದಲ್ಲಿ ಯೋಗ

ಧಾರವಾಡದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ನಡೆಯಿತು. ಅಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗಾಸನ ಮಾಡಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಲ್ಲಾ ಆರೋಗ್ಯಾಧಿಕಾರಿ ಶಶಿ ಪಾಟೀಲ ಪಾಲ್ಗೊಂಡಿದ್ದರು.

ಯೋಗ – ಜಾಗತಿಕ ಕ್ಷೇಮದ ರಾಯಭಾರಿ

ಅಮೆರಿಕದಲ್ಲಿ ಪ್ರಾರ್ಥನೆಯೊಂದಿಗೆ ಯೋಗ

ವಾಷಿಂಗ್ಟನ್‌: ಪೊಟೊಮ್ಯಾಕ್‌ ನದಿ ತೀರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಾರ್ಥನೆ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೂಲಕ ಚಾಲನೆ ನೀಡಲಾಯಿತು.

ಅಮೆರಿಕದಲ್ಲಿ ಭಾರತದ ಉಪ ರಾಯಭಾರಿಯಾಗಿರುವ ಶ್ರೀಪ್ರಿಯಾ ರಂಗನಾಥನ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯೋಗವು ಸಮಾಜದ ಉಜ್ವಲ ಭವಿಷ್ಯಕ್ಕಾಗಿ ಸಾಮರಸ್ಯ ಮತ್ತು ಸಮತೋಲನವನ್ನು ಸೃಷ್ಟಿಸುವ ಮಾರ್ಗವಾಗಿದೆ ಎಂದು ಹೇಳಿದರು.

ಮಥುರಾದಲ್ಲಿ ಹೇಮಾ ಮಾಲಿನಿ

ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.

ವಿಧಾನಸೌಧದ ಆವರಣದಲ್ಲಿ ಯೋಗೋತ್ಸವ

ಬೆಳಗಾವಿಯಲ್ಲಿ ಪ್ರದರ್ಶನ

ಬೆಳಗಾವಿಯ ಶಿವಬಸವ ನಗರದ ಕೆಪಿಟಿಸಿಲ್ ಭವನದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ಶುಕ್ರವಾರ ನಡೆದ ಯೋಗ ದಿನಾಚರಣೆಯಲ್ಲಿ ನೂರಾರು ಜನರು ಉತ್ಸಾಹದಿಂದ ಯೋಗಾಸನ ಮಾಡಿದರು.

ವಿವಿಧ ಯೋಗಾಸನ ಪ್ರದರ್ಶಿಸಿದ ತರಬೇತುದಾರರಾದ ಆರತಿ ಪಡಸಲಗಿ ಅವರು, ಯೋಗದ ಮಹತ್ವ ಸಾರಿದರು.

ಸಂಸದ ಜಗದೀಶ ಶೆಟ್ಟರ್, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಶ್ರೀಕಾಂತ ಸುಣಧೋಳಿ ಉಪಸ್ಥಿತರಿದ್ದರು.

ಬೇರೆ ದೇಶಗಳಿಂದ ಬಂದಿದ್ದ ಯೋಗಪಟುಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಯಚೂರಲ್ಲಿ ಸಾಮೂಹಿಕ ಯೋಗ

ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ ಯೋಗ ದಿನಾಚರಣೆಯ ಅಂಗವಾಗಿ ರಾಯಚೂರಿನ ಮಹ್ಮಾತ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಮೂಹಿಕ ಯೋಗ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಅಭ್ಯಾಸ ಮಾಡಿದರು.

ವಿಜಯನಗರಯಲ್ಲಿ ಯೋಗ

ಆಯುಷ್ ಇಲಾಖೆ, ವಿಜಯನಗರ ಜಿಲ್ಲಾಡಳಿತ ಸಹಿತ ವಿವಿಧ ಇಲಾಖೆಗಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಹೊಸಪೇಟೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ 10ನೇ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಚಾಲನೆ ನೀಡಿದರು.

ಕಲಬುರಗಿಯಲ್ಲಿ ಯೋಗ ದಿನದ ಸಂಭ್ರಮ

ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಯೋಗಾಭ್ಯಾಸದ ಸಂಭ್ರಮ ಮನೆ ಮಾಡಿತ್ತು.

ಆಗಷ್ಟೇ ಸೂರ್ಯ ಮೋಡಗಳ ಮಧ್ಯದಿಂದ ಮಿನುಗುತ್ತಿದ್ದ. ಮೋಡ ಕವಿದ ಆಹ್ಲಾದಕರ ವಾತಾವರಣದಲ್ಲಿ ನೂರಾರು ಜನರು ವಿವಿಧ ಆಸನಗಳನ್ನು ಮಾಡುವ ಮೂಲಕ 10ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಪಾಲ್ಗೊಂಡು ಆರೋಗ್ಯ ‌ಕಾಳಜಿ ಮೆರೆದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಡಿಪಿಯು ಶಿವಶರಣಪ್ಪ ಮುಳೆಗಾಂವ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ವಿವಿಧ ಇಲಾಖೆಗಳ ಹಲವು ಅಧಿಕಾರಿಗಳು ಪಾಲ್ಗೊಂಡು ಹಲವು ಆಸನಗಳನ್ನು ಮಾಡಿದರು.

ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ವಸತಿ ಶಾಲೆಗಳ ಮಕ್ಕಳು, ಕ್ರೀಡಾಶಾಲೆಗಳ ವಿದ್ಯಾರ್ಥಿಗಳು, ಸಾಮಾನ್ಯ ಜನರೂ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಒಂದು ಗಂಟೆಯಷ್ಟು ಕಾಲ ನಡೆದ ಅಭ್ಯಾಸದಲ್ಲಿ ನಿಂತು ಮಾಡುವ, ಕುಳಿತು ಮಾಡುವ, ಮಲಗಿ‌ ಮಾಡುವ ವಿವಿಧ ಆಸನಗಳನ್ನು ‌ಅಭ್ಯಾಸ ಮಾಡಲಾಯಿತು.

ಇಸ್ರೇಲ್‌ ರಾಜಧಾನಿಯಲ್ಲಿ ಯೋಗ

ಇಸ್ರೇಲ್‌ನ ಟೆಲ್‌ ಅವೀವ್‌ ನಗರದಲ್ಲಿ ನೂರಾರು ಜನರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇಶದಾದ್ಯಂತ ಯೋಗ ಕಾರ್ಯಕ್ರಮಗಳು ನಡೆಯುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಳೆಯಿಂದಾಗಿ ವಿಳಂಬವಾದ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ.

ಮಳೆಯಿಂದಾಗಿ ಮೋದಿ 'ಯೋಗ' ವಿಳಂಬ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀನಗರದ ದಾಲ್‌ ಸರೋವರ ತೀರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 6.30ಕ್ಕೆ ನಿಗದಿಯಾಗಿದ್ದ ಯೋಗ ದಿನ ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿದೆ.

ದಾಲ್‌ ಸರೋವರದ ಸುತ್ತಲೂ ಭಾರಿ ಮಳೆಯಾಗುತ್ತಿದೆ. ಕಣಿವೆಯಾದ್ಯಂತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಹಾಗಾಗಿ, ಹೊರಾಂಗಣದಲ್ಲಿ ಕಾರ್ಯಕ್ರಮ ನಡೆಸುವುದು ಸವಾಲಿನ ಸಂಗತಿ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.