ಚೆನ್ನೈ: ತಮಿಳುನಾಡಿನ ಮೆಟ್ಟೂರು ಜಲಾಶಯವು ಶನಿವಾರ ತುಂಬಿದ್ದು ಈಗ 65 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಸೇಲಂ, ತಿರುಚಿರಾಪಳ್ಳಿ ಸೇರಿ 11 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಕರ್ನಾಟಕದ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಕಾರಣ ಮೆಟ್ಟೂರು ಜಲಾಶಯ ತುಂಬಿದೆ. ಕಳೆದ ವರ್ಷವೂ ಜಲಾಶಯ ತುಂಬಿತ್ತು.
ಭಾನುವಾರ ಸಂಜೆ ಜಲಾಶಯಕ್ಕೆ ಒಳಹರಿವು 71 ಸಾವಿರ ಕ್ಯುಸೆಕ್ ಇತ್ತು. ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ 94.75 ಟಿಎಂಸಿ ಅಡಿ.
11 ಜಿಲ್ಲೆಗಳ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕಾವೇರಿ ದಡದಲ್ಲಿ ಇರುವ ಜನರನ್ನು ತೆರವು ಮಾಡುವುದಕ್ಕೆ ಅಗತ್ಯವಾದ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿದೆ.
ತಮಿಳುನಾಡಿನ ಕಾವೇರಿ ಮುಖಜ ಪ್ರದೇಶದ ಜನರು ಕೃಷಿಗೆ ಈ ಜಲಾಶಯದ ನೀರನ್ನೇ ಅವಲಂಬಿಸಿದ್ದಾರೆ. ಈಗ ಜಲಾಶಯ ತುಂಬಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಸಾಮಾನ್ಯವಾಗಿ, ಜೂನ್ 12ರಂದು ಜಲಾಶಯದಿಂದ ನೀರು ಹೊರಬಿಡಲಾಗುತ್ತದೆ. ಈ ಬಾರಿ, ಮಳೆ ವಿಳಂಬವಾದ ಕಾರಣ ಜಲಾಶಯಕ್ಕೆ ನೀರು ಬಂದಿರಲಿಲ್ಲ. ಹಾಗಾಗಿ, ಆಗಸ್ಟ್ 13ರಂದು ಮೊದಲ ಬಾರಿ ಕೃಷಿಗೆ ನೀರು ಹರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.