ಮುಂಬೈ: ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರಾಗಿ ಹೊಸದಾಗಿ ಚುನಾಯಿತರಾದ 11 ಮಂದಿ ಶಾಸಕರು ಇಂದು (ಭಾನುವಾರ) ಇಲ್ಲಿನ ವಿಧಾನ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಜುಲೈ 12 ರಂದು ರಾಜ್ಯ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ(ಶಿವಸೇನಾ ಮತ್ತು ಎನ್‌ಸಿಪಿ) ಸ್ಪರ್ಧಿಸಿದ್ದ ಎಲ್ಲಾ 9 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 5 ಸ್ಥಾನಗಳನ್ನು ಗೆದ್ದರೆ, ಶಿವಸೇನಾ ಮತ್ತು ಎನ್‌ಸಿಪಿ ತಲಾ 2 ಸ್ಥಾನಗಳನ್ನು ಗೆದ್ದಿವೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನವನ್ನು ಗೆದ್ದರೆ, ಎನ್‌ಸಿಪಿ (ಎಸ್‌ಪಿ) ಬೆಂಬಲಿತ ಪಿಡಬ್ಲ್ಯೂಪಿ ನಾಯಕ ಜಯಂತ್ ಪಾಟೀಲ್ ಸೋಲನುಭವಿಸಿದ್ದರು.
ಬಿಜೆಪಿ ಎಂಎಲ್‌ಸಿಗಳಾದ ಪಂಕಜಾ ಮುಂಡೆ, ಪರಿಣಯ್ ಫುಕ್, ಯೋಗೇಶ್ ತಿಲೇಕರ್, ಅಮಿತ್ ಗೋರ್ಖೆ, ಮತ್ತು ಸದಾಭೌ ಖೋಟ್, ಎನ್‌ಸಿಪಿಯ ರಾಜೇಶ್ ವಿಟೇಕರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಶಿವಾಜಿರಾವ್ ಗರ್ಜೆ, ಶಿವಸೇನಾದ ಭಾವನಾ ಗವಾಲಿ ಮತ್ತು ಕೃಪಾಲ್ ತುಮಾನೆ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್‌ನ ಪ್ರದ್ನ್ಯಾ ಸತವ್ ಮತ್ತು ಶಿವಸೇನಾ (ಯುಬಿಟಿ) ನಾಯಕ ಮಿಲಿಂದ್ ನಾರ್ವೇಕರ್ ಕೂಡ ರಾಜ್ಯ ವಿಧಾನಮಂಡಲದ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.