ADVERTISEMENT

ಏಳು ತಿಂಗಳಲ್ಲಿ ಕಳ್ಳಬೇಟೆಗೆ 112 ಹುಲಿ ಬಲಿ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 22:51 IST
Last Updated 29 ಜುಲೈ 2023, 22:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಸಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರಸಕ್ತ ವರ್ಷದ ಜನವರಿಯಿಂದ ಜುಲೈವರೆಗಿನ ಏಳು ತಿಂಗಳ ಅವಧಿಯಲ್ಲಿ 112 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿರುವ ಸಂಗತಿ ಆತಂಕ ಮೂಡಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ–ಅಂಶಗಳನ್ನು ಆಧರಿಸಿ ವನ್ಯಜೀವಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಯಾದ ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ (ಡಬ್ಲ್ಯುಟಿಐ) ಈ ಮಾಹಿತಿ ನೀಡಿದೆ.

ಅಲ್ಲದೇ, ಕಳೆದ ಐದು ವರ್ಷಗಳಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರಕ್ಕೆ ಭಾರತದಲ್ಲಿ 114 ಹುಲಿಗಳು ಬಲಿಯಾಗಿವೆ ಎಂದು ಡಬ್ಲ್ಯುಟಿಐ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ವಿಶ್ವದಾದ್ಯಂತ ಹುಲಿಗಳ ದೇಹದ ಭಾಗಗಳು ಮತ್ತು ಅದರಿಂದ ತಯಾರಿಸುವ ಉತ್ಪನ್ನಗಳಿಗೆ ಬೇಡಿಕೆ ಇದೆ. ಹಾಗಾಗಿ, ಅವುಗಳ ಕಳ್ಳಬೇಟೆ ಅವ್ಯಾಹತವಾಗಿದೆ.‌ ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗವು (ಡಬ್ಲ್ಯುಸಿಸಿಬಿ) ದೇಶದಾದ್ಯಂತ ಹರಡಿರುವ ಈ ವ್ಯವಸ್ಥಿತ ಮಾರಾಟ ಜಾಲಗಳನ್ನು ಪತ್ತೆಹಚ್ಚಿ ನಿಯಂತ್ರಣಕ್ಕೆ ಕ್ರಮವಹಿಸಿದೆ. 

‘ವನ್ಯಜೀವಿ ವ್ಯಾಪಾರದಲ್ಲಿ ಸಂಘಟಿತ ಜಾಲಗಳಷ್ಟೇ ಸಕ್ರಿಯವಾಗಿಲ್ಲ. ಇದರಲ್ಲಿ ಕೆಲವು ಸಾಂಪ್ರದಾಯಿಕ ಬುಡಕಟ್ಟು ಬೇಟೆಗಾರರು ಇದ್ದಾರೆ. ಕಾಡುಹಂದಿಗಳಿಗೆ ಅಳವಡಿಸುವ ಉರುಳುಗಳನ್ನು ಹುಲಿ ಬೇಟೆಗೂ ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಇ–ವಾಣಿಜ್ಯ ವೆಬ್‌ಸೈಟ್‌ಗಳನ್ನು ಬಳಸಿಕೊಂಡು ವನ್ಯಜೀವಿ ವ್ಯಾಪಾರವನ್ನು ನಡೆಸಲಾಗುತ್ತಿದೆ’ ಎಂದು ಡಬ್ಲ್ಯುಟಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.