ADVERTISEMENT

ಗಢಚಿರೋಲಿ: ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಸಾವು

ಪಿಟಿಐ
Published 17 ಜುಲೈ 2024, 15:52 IST
Last Updated 17 ಜುಲೈ 2024, 15:52 IST
ಸಾಂದರ್ಭಿಕ ಚಿತ್ರ Use original metadata
ಸಾಂದರ್ಭಿಕ ಚಿತ್ರ Use original metadata   

ಗಡ್ಚಿರೋಲಿ: ಛತ್ತೀಸಗಢ ಗಡಿ ಸಮೀಪದಲ್ಲಿರುವ ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಬುಧವಾರ ಪೊಲೀಸರು ಮತ್ತು ‘ಸಿ60’ ಕಮಾಂಡೊಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.  

ಈ ಮಹತ್ವದ ಕಾರ್ಯಾಚರಣೆ ನಡೆಸಿದ ‘ಸಿ60’ ಕಮಾಂಡೊಗಳು ಹಾಗೂ ಗಢಚಿರೋಲಿ ಪೊಲೀಸರಿಗೆ ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡಣವೀಸ್‌ ಅವರು ₹51 ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಗಢಚಿರೋಲಿ ಪೊಲೀಸ್‌ ವರಿಷ್ಠಾಧಿಕಾರಿ ನೀಲೋತ್ಪಲ್‌ ತಿಳಿಸಿದರು. 

‘ವಾಂಡೋಲಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಕ್ಸಲರು ಮತ್ತು ಸಿ60 ಕಮಾಂಡೊಗಳ ನಡುವೆ 6 ಗಂಟೆ ದೀರ್ಘ ಕಾಲದವರೆಗೆ ಭಾರಿ ಗುಂಡಿನ ಚಕಮಕಿ ನಡೆಯಿತು. ನಕ್ಸಲರ ಗುರುತು ಪತ್ತೆ ಮತ್ತು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಗಾಯಗೊಂಡಿರುವ ಎಸ್‌ಪಿ ಹಾಗೂ ‘ಸಿ60’ ಪಡೆಯ ಸೈನಿಕರಿಬ್ಬರು ಅಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಅವರು ಹೇಳಿದರು.  

ADVERTISEMENT

ಘಟನೆ ನಡೆದ ಸ್ಥಳದಲ್ಲಿ 12 ನಕ್ಸಲರ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ 3 ಎಕೆ– 47, 2 ಐಎನ್‌ಎಸ್‌ಎಎಸ್‌ ರೈಫಲ್‌ಗಳು, ಕಾರ್‌ಬೈನ್‌ ಮತ್ತು ಎಸ್‌ಎಲ್‌ಆರ್‌ ಸೇರಿದಂತೆ 7 ವಿವಿಧ ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹತ್ಯೆಯಾದ ನಕ್ಸಲರ ಪೈಕಿ ಒಬ್ಬನನ್ನು ಟೀಟಾಗಢ ದಳದ ಉಸ್ತುವಾರಿ ಡಿವಿಸಿಎಂ ಲಕ್ಷ್ಮಣ ಅತ್ರಾಮ್‌ ಅಲಿಯಾಸ್‌ ವಿಶಾಲ್‌ ಅತ್ರಾಮ್‌ ಎಂದು ಗುರುತಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.