ಚೆನ್ನೈ: ಬಿಜೆಪಿಯ ತಮಿಳುನಾಡು ಘಟಕದಲ್ಲಿ ಪಕ್ಷಾಂತರ ಮುಂದುವರಿದಿದೆ. ಐಟಿ ವಿಭಾಗದ ಪದಾಧಿಕಾರಿ ಸೇರಿದಂತೆ ಪಕ್ಷದ 13 ಪದಾಧಿಕಾರಿಗಳು ಪಕ್ಷ ತೊರೆದಿದ್ದಾರೆ.
ಪಕ್ಷದ ಚೆನ್ನೈ ಪಶ್ಚಿಮ ಘಟಕದ ಐಟಿ ವಿಭಾಗದ ಮುಖ್ಯಸ್ಥ ಓರತಿ ಅನ್ಬರಸು ಮತ್ತು ಇತರ 12 ಮಂದಿ ಪಕ್ಷವನ್ನು ತೊರೆದಿದ್ದಾರೆ. ಆದರೆ ಆಡಳಿತಾರೂಢ ಡಿಎಂಕೆಗೆ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಯಕನಾದ, ರಾಜ್ಯ ಐಟಿ ವಿಭಾಗದ ಮಾಜಿ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಅವರನ್ನು ಅನುಸರಿಸುವುದಾಗಿ ತಿಳಿಸಿದ್ದಾರೆ. ನಿರ್ಮಲ್ ಕುಮಾರ್ ಅವರು ಬಿಜೆಪಿ ಬಿಟ್ಟು ಎಐಎಡಿಎಂಕೆ ಸೇರಿದ್ದರು.
ಪಕ್ಷದ ಇತರ ಕೆಲವು ಪದಾಧಿಕಾರಿಗಳೂ ಸಹ ಬಿಜೆಪಿ ತೊರೆದು ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಗೆ ಸೇರಿದ್ದಾರೆ. ಇದು ಮಿತ್ರಪಕ್ಷಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ದೀರ್ಘಕಾಲದಿಂದ ಬಿಜೆಪಿಯಲ್ಲಿದ್ದೇನೆ. ಅಲ್ಲಿನ ಪಿತೂರಿಗಳಿಗೆ ಇನ್ನು ಬಲಿಯಾಗಲಾರೆ. ಹೀಗಾಗಿ ಬಿಜೆಪಿಯನ್ನು ತೊರೆಯುತ್ತಿದ್ದೇನೆ ಎಂದು ಅನ್ಬರಸು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ಕೊಯಮತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ, ‘ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಇತರ ಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಹೀಗಾಗಿ ಕೆಳ ಹಂತದ ಕೆಲ ನಾಯಕರು ಪಕ್ಷ ತೊರೆಯುವ ವಿಷಯವೂ ದೊಡ್ಡದಾಗಿ ಕಾಣುತ್ತಿದೆ’ ಎಂದು ಹೇಳಿದರು.
ಮುಂದಿನ ಮೂರು ತಿಂಗಳಲ್ಲಿ ಕೆಲವು ದೊಡ್ಡ ನಾಯಕರು ಬಿಜೆಪಿ ತೊರೆಯಬಹದು. ದೊಡ್ಡ ನಾಯಕರು ಪಕ್ಷಕ್ಕೆ ಬರುವ ಸಾಧ್ಯತೆಗಳೂ ಉಂಟು ಎಂದು ಅವರು ತಿಳಿಸಿದರು.
ಹೆಸರಿನ ಮುಂದೆ ಎಂಪಿ ಅಥವಾ ಎಂಎಲ್‌ಎ ಎಂಬ ಟ್ಯಾಗ್ ಹಾಕಿಕೊಳ್ಳಲೆಂದು ನಾನು ಬಿಜೆಪಿಗೆ ಸೇರಿಲ್ಲ. ಬಿಜೆಪಿ ಬೆಳವಣಿಗೆಗಾಗಿ ಪಕ್ಷ ಸೇರಿದ್ದೇನೆ ಎಂದೂ ಅಣ್ಣಾಮಲೈ ಹೇಳಿದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.