ADVERTISEMENT

15ನೇ ಜನಗಣತಿ ವರದಿ ಪ್ರಕಟ: ನಾವೀಗ 121 ಕೋಟಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 19:00 IST
Last Updated 31 ಮಾರ್ಚ್ 2011, 19:00 IST

ನವದೆಹಲಿ (ಪಿಟಿಐ/ಐಎಎನ್‌ಎಸ್):  ಹೊಸ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿಗಳಿಗೆ ಏರಿದೆ. ಕಳೆದ ಒಂದು ದಶಕದಲ್ಲಿ 18.1 ಕೋಟಿ ಜನಸಂಖ್ಯೆ ಹೆಚ್ಚಳವಾಗಿದೆ. ಹಾಗೆಯೇ ಒಂಬತ್ತು ದಶಕಗಳ ನಂತರ ಇದೇ ಮೊದಲ ಬಾರಿಗೆ ಜನಸಂಖ್ಯೆ ವೃದ್ಧಿದರ ಗಣನೀಯವಾಗಿ ಇಳಿಮುಖವಾಗಿದೆ.

ಗುರುವಾರ ಇಲ್ಲಿ ಬಿಡುಗಡೆ ಮಾಡಲಾದ ಹೊಸ ಜನಗಣತಿ ಪ್ರಾಥಮಿಕ ವರದಿಯ ಪ್ರಕಾರ ಭಾರತದ ಜನಸಂಖ್ಯೆ ವಿಶ್ವದ ಜನಸಂಖ್ಯೆ ಶೇ 17.5ರಷ್ಟು ಆಗಿದ್ದೆ. ಪುರುಷರ ಸಂಖ್ಯೆ 63.7 ಕೋಟಿ ಮತ್ತು ಮಹಿಳೆಯರ ಸಂಖ್ಯೆ 58.5 ಕೋಟಿ ಆಗಿದೆ. ಜನಸಂಖ್ಯೆಯಲ್ಲಿ ಚೀನಾ ಇಂದಿಗೂ ಮುಂದಿದ್ದು, ವಿಶ್ವ ಜನಸಂಖ್ಯೆಯ 19.4ರಷ್ಟು ಚೀನಾದಲ್ಲಿದ್ದಾರೆ. ಭಾರತದ ಜನಸಂಖ್ಯೆ ಅಮೆರಿಕ, ಇಂಡೋನೇಷ್ಯಾ, ಬ್ರೆಜಿಲ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಜಪಾನ್‌ಗಳ ಒಟ್ಟು ಜನಸಂಖ್ಯೆಗೆ ಸಮವಾಗಿದೆ.

2001-2011ರ ದಶಕದ ಅವಧಿಯಲ್ಲಿ ಜನಸಂಖ್ಯೆ 18.1 ಕೋಟಿ ಹೆಚ್ಚಳವಾಗಿದೆ. ಜನಸಂಖ್ಯೆ ವೃದ್ಧಿ ದರ 2001ರಲ್ಲಿ 21.15ರಷ್ಟಿದ್ದು, ಪ್ರಸ್ತುತ 17.64ಕ್ಕೆ ಇಳಿದಿದೆ. ಒಂಬತ್ತು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆಯ ವೃದ್ಧಿ ದರ ಇಳಿಮುಖವಾಗಿದೆ. 1911- 1921ರ ಅವಧಿಯಲ್ಲಿ ಹಿಂದಿನ ದಶಕಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗಿತ್ತು ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಮತ್ತು ಭಾರತ ಜನಗಣತಿ ಆಯುಕ್ತ  ಸಿ.ಚಂದ್ರಮೌಳಿ ಪತ್ರಕರ್ತರಿಗೆ ತಿಳಿಸಿದರು. ಗೃಹ ಕಾರ್ಯದರ್ಶಿ ಗೋಪಾಲ್ ಕೆ.ಪಿಳ್ಳೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ: ಇಡೀ ದೇಶದಲ್ಲಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಇದ್ದು, ಇಲ್ಲಿ 19.9 ಕೋಟಿ ಜನರಿದ್ದಾರೆ. ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಅತ್ಯಂತ ಕಡಿಮೆ 64,429 ಜನರಿದ್ದಾರೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಒಟ್ಟು ಜನಸಂಖ್ಯೆ ಅಮೆರಿಕದ ಜನಸಂಖ್ಯೆಗಿಂತಲೂ ಹೆಚ್ಚು.

ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿ.ಮೀ ಗೆ 37,346 ಆಗಿದೆ. ಹಾಗೆಯೇ ಅತಿ ಕಡಿಮೆ ಜನಸಾಂದ್ರತೆ ಇರುವ ಪ್ರದೇಶವೆಂದರೆ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ. ಇಲ್ಲಿ ಪ್ರತಿ ಚದರ ಕಿ.ಮೀಗೆ ಕೇವಲ ಒಬ್ಬ ವ್ಯಕ್ತಿ ಮಾತ್ರ ಇದ್ದಾರೆ.

ಜನಗಣತಿ ಪ್ರಕಾರ ಈಗಲೂ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ಸಾವಿರ ಗಂಡು ಮಕ್ಕಳಿಗೆ 914  ಹೆಣ್ಣು ಮಕ್ಕಳಿದ್ದಾರೆ. ಈ ಅಂಶ ಹೆಚ್ಚು ಕಳವಳಕಾರಿ ಎಂದು ಚಂದ್ರಮೌಳಿ ತಿಳಿಸಿದರು. ಏಳು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಶೇ 74ರಷ್ಟು ಸಾಕ್ಷರತೆ ಪ್ರಮಾಣ ಇದ್ದು, ಶೇ 26ರಷ್ಟು ಅನಕ್ಷರಸ್ಥರಿದ್ದಾರೆ. ಸಾಕ್ಷರತೆ ಪ್ರಮಾಣ ಒಂದು ದಶಕದಲ್ಲಿ 64.83ರಿಂದ 74.04ಕ್ಕೆ ಅಂದರೆ ಶೇ 9.21ರಷ್ಟು ಹೆಚ್ಚಳವಾಗಿದೆ.

ಇದು ತಾತ್ಕಾಲಿಕ ವರದಿಯಾಗಿದ್ದು, ಮುಂದಿನ ವರ್ಷದ ವೇಳೆಗೆ ಪೂರ್ಣ ಪ್ರಮಾಣದ ವರದಿ ಲಭ್ಯವಾಗಲಿದೆ ಎಂದು ಚಂದ್ರಮೌಳಿ ತಿಳಿಸಿದರು. 2001ರಲ್ಲಿ ತಾತ್ಕಾಲಿಕ ವರದಿಗೂ ಅಂತಿಮ ವರದಿಗೂ ಶೇ 2ರಷ್ಟು ವ್ಯತ್ಯಾಸ ಇತ್ತು. ಹಾಗೆಯೇ ಈ ವರದಿಯಲ್ಲಿಯೂ ಅಲ್ಪ ಪ್ರಮಾಣದ ವ್ಯತ್ಯಾಗಳು ಕಂಡುಬರಬಹುದು ಎಂದರು.

1872ರ ನಂತರ ದೇಶದಲ್ಲಿ ನಡೆಯುತ್ತಿರುವ 15ನೇ ಜನಗಣತಿ ಇದಾಗಿದೆ. ಎಲ್ಲಾ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿ ನಡೆದಿದ್ದು, ಇದಕ್ಕಾಗಿ 2,200 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿದೆ. ಸುಮಾರು 27 ಲಕ್ಷ ಮಂದಿ ಜನಗಣತಿಯಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ ಎಂಟು ಸಾವಿರ ಮೆಟ್ರಿಕ್ ಟನ್ ಕಾಗದ ಮತ್ತು 10,500 ಮೆಟ್ರಿಕ್ ಟನ್ ಇತರ ಉಪಕರಣಗಳ ಬಳಕೆಯಾಗಿದೆ ಎನ್ನುವ ಮಾಹಿತಿಯನ್ನೂ ಚಂದ್ರಮೌಳಿ ನೀಡಿದರು.

ಜನ ಸಂಖ್ಯೆ ವೃದ್ಧಿ ದರ ಇಳಿಕೆ

ರಾಜ್ಯ                  2001      2011

ಉತ್ರರ ಪ್ರದೇಶ   25.85    20.09
ಮಹಾರಾಷ್ಟ್ರ        22.73    15.99
ಬಿಹಾರ                29.62     25.07
ಪಶ್ಚಿಮ ಬಂಗಾಳ 17.77     13.93
ಒಟ್ಟಾರೆ 21.15 17.64

ವರ್ಷ     2011    2001
ಭಾರತ 121.02  102.88

ADVERTISEMENT

ಕರ್ನಾಟಕ
06.11 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.