ADVERTISEMENT

ಕೇರಳ: ‘ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಸಂಚಾರಿ ವೈದ್ಯಕೀಯ ತಂಡ; 15 ಆ್ಯಂಬುಲೆನ್ಸ್’

ಏಜೆನ್ಸೀಸ್
Published 7 ಆಗಸ್ಟ್ 2020, 10:09 IST
Last Updated 7 ಆಗಸ್ಟ್ 2020, 10:09 IST
ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ
ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ   

ತಿರುವನಂತಪುರಂ: ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿರುವ ಇಡುಕ್ಕಿ ಜಿಲ್ಲೆಯ ರಾಜಮಲ ಪ್ರದೇಶಕ್ಕೆ ಸಂಚಾರಿ ವೈದ್ಯಕೀಯ ತಂಡ ಹಾಗೂ 15 ಆ್ಯಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಹೇಳಿದ್ದಾರೆ.

‘ಅಗತ್ಯವಿದ್ದರೆ ಮತ್ತಷ್ಟು ತಂಡಗಳನ್ನು ಕಳುಹಿಸಲಾಗುವುದು’ ಎಂದಿರುವ ಅವರು, ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸಜ್ಜಾಗಬೇಕು ಎಂದು ಸೂಚನೆ ನೀಡಿದ್ದಾರೆ.

ಭೂಕುಸಿತದಿಂದಾಗಿ ಜಿಲ್ಲೆಯ ರಾಜಮಲ ಪ್ರದೇಶದಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದು, 10 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ರಾಜಮಲಕ್ಕೆರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್‌) ನಿಯೋಜಿಸಲಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ಜೊತೆಗೆ,‘ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಪೊಲೀಸ್‌, ಅಗ್ನಿಶಾಮಕ, ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ಹೇಳಿದ್ದಾರೆ.

ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್‌ ಸೇವೆ ಒದಗಿಸುವಂತೆ ವಾಯುಸೇನೆಯನ್ನು ಸಂಪರ್ಕಿಸಲಾಗಿದೆ. ಶೀಘ್ರವೇ ಹೆಲಿಕಾಪ್ಟರ್‌ಗಳು ಲಭ್ಯವಾಗುವ ಸಾಧ್ಯತೆ ಇದೆ.

ಕೇರಳದ ಹಲವು ಪ್ರದೇಶಗಳಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಇಡುಕ್ಕಿ, ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಆಗಸ್ಟ್‌ 11ರ ವರೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.