ದಾಂತೇವಾಡ: ಛತ್ತೀಸಗಢದ ದಾಂತೇವಾಡದಲ್ಲಿ ಕಚ್ಚಾಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಏಳು ಮಂದಿ ಮಹಿಳೆಯರು ಸೇರಿದಂತೆ 15 ಜನ ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಧಿತರ ಪೈಕಿ ಬಹುತೇಕರು ಸಿಪಿಐ (ಮಾವೋವಾದಿ) ಸಂಘಟನೆಯ ಸಕ್ರಿಯ ಕೇಡರ್‌ಗಳಾಗಿದ್ದಾರೆ. ಬಂಧಿತರಿಂದ ಒಂದು ಕಚ್ಚಾಬಾಂಬ್, ವಿದ್ಯುತ್ ತಂತಿ, ಸ್ಫೋಟಕ, ಊಟದ ಡಬ್ಬ, ಮಾವೋವಾದಿಗೆ ಸಂಬಂಧಿಸಿದ ಕರಪತ್ರಗಳು ಮತ್ತು ಸಾಹಿತ್ಯ, ನಕ್ಸಲರ ಸಮವಸ್ತ್ರ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಾಂತೇವಾಡದ ಡಿಎಸ್‌ಪಿ ಉನ್ನತಿ ಠಾಕೂರ್ ತಿಳಿಸಿದ್ದಾರೆ.
ಗುಮಲ್ನರ್ ಮತ್ತು ಮುಸ್ತಲ್ನಾರ್ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಶನಿವಾರ ಸಂಜೆ ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದವು. ಭಾನುವಾರ ಸಂಜೆ 4.30ರ ಸುಮಾರಿಗೆ ಭದ್ರತಾ ಪಡೆಗಳನ್ನು ಗುರಿಯಾಗಿಸಿ, ನಕ್ಸಲರು ಕಚ್ಚಾ ಬಾಂಬ್ ಸ್ಫೋಟಿಸಿದ್ದರು. ಅದೃಷ್ಟವಶಾತ್ ಭದ್ರತಾ ಸಿಬ್ಬಂದಿಗೆ ಯಾವುದೇ ಹಾನಿಯಾಗಲಿಲ್ಲ ಎಂದು ಹೇಳಿದರು.
ಈ ಸ್ಫೋಟದ ಬಳಿಕ ಕೆಲವು ಶಂಕಿತರು ಪರಾರಿಯಾಗಲು ಯತ್ನಿಸಿದರು. ಆಗ ದುಂಬಾಲು ಹತ್ತಿದ ಭದ್ರತಾ ಪಡೆಗಳು, 15 ನಕ್ಸಲರನ್ನು ಸುತ್ತುವರಿದು ವಶಕ್ಕೆ ಪಡೆಯಲಾಗಿದೆ. ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಅರಣ್ಯದಲ್ಲಿ ಅವಿತುಕೊಂಡಿದ್ದಾಗಿ ವಿಚಾರಣೆ ವೇಳೆ ಅವರೇ ಬಹಿರಂಗಪಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.