ನಾಗಪುರ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಸೇರಿದ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದರು.
ನಗರದಲ್ಲಿ ನಡೆದ ಕೃಷಿ–ದೂರದೃಷ್ಟಿ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹದಿನೈದು ವರ್ಷ ಪೂರೈಸಿದ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿದ ಎಲ್ಲಾ ವಾಹನಗಳನ್ನು ಗುಜರಿಗೆ ಹಾಕುವುದಕ್ಕೆ ಸಂಬಂಧಿಸಿದ ಕಡತಕ್ಕೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸಹಿ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೂ ಸ್ಕ್ರಾಪಿಂಗ್ ನೀತಿಯ ಸುತ್ತೋಲೆ ರವಾನೆ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.
ಇಂಡಿಯನ್ ಆಯಿಲ್‌ನ ಎರಡು ಘಟಕಗಳು ಪಾಣಿಪತ್‌ನಲ್ಲಿ ಶೀಘ್ರ ಆರಂಭವಾಗಲಿದೆ. ಒಂದರಲ್ಲಿ ನಿತ್ಯ ಒಂದು ಲಕ್ಷ ಟನ್ ಲೀಟರ್ ಎಥೆನಾಲ್ ಉತ್ಪಾದಿಸಿದರೆ, ಮತ್ತೊಂದರಲ್ಲಿ ಭತ್ತದ ಹುಲ್ಲು ಬಳಸಿ ಜೈವಿಕ –ಬಿಟುಮೆನ್ ಅನ್ನು ನಿತ್ಯ 150 ಟನ್ ಉತ್ಪಾದಿಸಲಾಗುವುದು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ದೇಶದ ವಿವಿಧೆಡೆ ಅಕ್ಕಿ ಉತ್ಪಾದಿಸುವ ಭಾಗಗಳಲ್ಲಿ ಇದು ದೊಡ್ಡ ಬದಲಾವಣೆಯಾಗಿದೆ.ಭತ್ತದ ಹುಲ್ಲು ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ. ಈಗ ಎಥೆನಾಲ್, ಬಯೊ–ಬಿಟುಮೆನ್ ಉತ್ಪಾದಿಸಲು ಬಳಸುವುದರಿಂದ ಮಾಲಿನ್ಯ ತಡೆಗಟ್ಟಬಹುದು ’ ಎಂದು ತಿಳಿಸಿದರು.
ದೇಶದಲ್ಲಿ 80 ಲಕ್ಷ ಟನ್ ಬಯೊ–ಬಿಟುಮೆನ್ ಅಗತ್ಯವಿದೆ. ಪ್ರಸ್ತುತ 50 ಲಕ್ಷ ಟನ್ ಉತ್ಪಾದಿಸಲಾಗುತ್ತಿದೆ. ಉಳಿದ 25 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.