ನವದೆಹಲಿ: 17ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 543 ಸಂಸದರಲ್ಲಿ 17 ಮಂದಿ ಸಂಸದರು ಅತ್ಯಂತ ಕಿರಿಯ ಅಂದರೆ,25 ರಿಂದ 33ರ ವಯಸ್ಸಿನ ಯುವ ಸಂಸದರಾಗಿದ್ದಾರೆ. ಈ ಪಟ್ಟಿಯಲ್ಲಿ ನಮ್ಮ ರಾಜ್ಯದ ಸಂಸದರಾದ ಪ್ರಜ್ವಲ್ ರೇವಣ್ಣ ಹಾಗೂ ತೇಜಸ್ವಿ ಸೂರ್ಯ ಕೂಡ ಇದ್ದಾರೆ.
ಒಟ್ಟು ಸಂಸದರಲ್ಲಿ 64 ಮಂದಿ ಸಂಸದರು 40ರ ವಯೋಮಾನದವರಿದ್ದರೆ, 41 ರಿಂದ 55ರ ಒಳಗಿನ ವಯಸ್ಸಿನ 221 ಮಂದಿ ಸಂಸದರಿದ್ದಾರೆ. ಉಳಿದವರು 55ರ ಮೇಲ್ಪಟ್ಟ ವಯಸ್ಸಿನವರು.ಇವರಲ್ಲಿ ಒಡಿಸ್ಸಾದ ಚಂದ್ರಾಣಿ ಮರ್ಮು 25ರ ವಯಸ್ಸಿನ ಅತ್ಯಂತ ಕಿರಿಯ ಸಂಸದೆಯಾಗಿದ್ದಾರೆ.
ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ 8.2 ಕೋಟಿ ಮತದಾರರು ಹೊಸದಾಗಿ ಮತದಾನದ ಹಕ್ಕು ಪಡೆದಿದ್ದಾರೆ.
ಸಂಸದೆ ಚಂದ್ರಾಣಿ ಈ ಕುರಿತು ಅಭಿಪ್ರಾಯ ವ್ಯಕ್ತಡಿಸಿದ್ದು, ನಾನು ಕೇವಲ ಫೋಟೋಗಳಲ್ಲಿ ಮಾತ್ರ ಸಂಸತ್ ಭವನವನ್ನು ನೋಡುತ್ತಿದ್ದೆ. ಈಗ ಅದರೊಳಗೆ ಪ್ರವೇಶ ಪಡೆಯುತ್ತಿದ್ದೇನೆ. ಆ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳುವ ಕುತೂಹಲ ತಡೆಯಲು ಸಾಧ್ಯವಾಗುತ್ತಿಲ್ಲ. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಬಿಜೆಡಿ ಪಕ್ಷದಿಂದ ಒಡಿಸ್ಸಾದ ಕಿಯೋಂಜರ್ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಚಂದ್ರಾಣಿ ಮರ್ಮು ಬಿ ಟೆಕ್ ಪದವೀಧರೆ, ಕೆಲಸಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಇದೇ ಸಂದರ್ಭದಲ್ಲಿಅವರ ಸಂಬಂಧಿಕರಾದ ಸಮಾಜ ಸೇವಕ ಹರ್‌ಮೋಹನ್ ಸೊರೇನ್ ಬಿಜೆಡಿಯಿಂದ ಪದವೀಧರ ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿದ್ದಾರೆ. ಹೋಗಿ ವಿಚಾರಿಸು ಎಂದಿದ್ದಾರೆ. ಕೂಡಲೆ ಚಂದ್ರಾಣಿ ತಾನು ರಾಜಕೀಯ ಪ್ರವೇಶಿಸಲು ಸಿದ್ಧ ಎಂದು ಪಕ್ಷದ ಮುಖಂಡರ ಬಳಿ ಹೇಳಿದ್ದಾರೆ. ಬಿಜೆಡಿಯ ಮುಖಂಡರು ಒಪ್ಪಿಕೊಂಡು ಅವಕಾಶ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅನಂತನಾಯಕ್ ಸ್ಪರ್ಧಿಸಿದ್ದರು. ಆದರೆ, ಚಂದ್ರಾಣಿ ಹೆಚ್ಚು ಮತಗಳನ್ನು ಪಡೆದು ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
'ನನಗೆ ಮೂವರು ಸೋದರಿಯರು ಇದ್ದಾರೆ, ನನ್ನ ರಾಜಕೀಯ ಪ್ರವೇಶದ ಬಗ್ಗೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ, ನನಗಿಂತ ನನ್ನ ತಂದೆ ತಾಯಿ ತುಂಬಾ ಕುತೂಹಲದಿಂದ ಇದ್ದಾರೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈಕೆಯ ತಾತ ಹರಿಹರ್ ಸೊರೇನ್ ಕಾಂಗ್ರೆಸ್ ನಿಂದ 1980 ರಿಂದ 1984ರವರೆಗೆ ಸಂಸದರಾಗಿದ್ದರು. ತಾತನ ತಲೆಮಾರಿನ ನಂತರ ಈ ತಲೆಮಾರಿನ ಚಂದ್ರಾಣಿ ನೂತನ ಸಂಸದೆಯಾಗಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ:17 ಮಂದಿ ಕಿರಿಯ ಸಂಸದರ ಪಟ್ಟಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ, 28 ವರ್ಷ ವಯಸ್ಸಿನ ಪ್ರಜ್ವಲ್ ಎಂಜಿನಿಯರಿಂಗ್ ಪದವೀಧರ, ಕಾಲೇಜು ದಿನಗಳಲ್ಲಿಯೇ ರಾಜಕೀಯದತ್ತ ಆಸಕ್ತಿ ವಹಿಸಿದ್ದರು. 7 ವರ್ಷಗಳ ಹಿಂದೆಯೇ ವಿಧಾನಸಭಾ ಚುನಾವಣೆಯ ಸಂದರ್ಭ ಜನರ ಜೊತೆ ಹೇಗೆ ಬೆರೆಯಬೇಕು ಎಂಬುದರಿಂದ ಹಿಡಿದು ರಾಜಕೀಯ ಪಟ್ಟುಗಳನ್ನು ಕಲಿತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಪ್ರಜ್ವಲ್ ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಜೆಡಿಎಸ್ ನೇತಾರ ಹಾಗೂ ಪ್ರಜ್ವಲ್ ರೇವಣ್ಣ ಅವರ ತಾತ ಮಾಜಿ ಪ್ರಧಾನಿ ದೇವೇಗೌಡ ಅವರು ಟಿಕೆಟ್ ನಿರಾಕರಿಸಿ ಮುಂದಿನ ಲೋಕಸಭೆಗೆ ಸ್ಪರ್ಧಿಸುವ ಸೂಚನೆ ನೀಡಿದ್ದರು. ಅಲ್ಲಿಂದ ಸ್ವಂತ ಊರು ಹಾಸನದಲ್ಲಿ ಇದ್ದು ಅಲ್ಲಿನ ಜನರ ಸಂಪರ್ಕ ಗಳಿಸಿ ವಿಶ್ವಾಸ ಗಿಟ್ಟಿಸಿಕೊಂಡರು. ನಂತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ ಗೆ ಆಯ್ಕೆಯಾಗಿದ್ದಾರೆ.
ಸಂಸದ ತೇಜಸ್ವಿ ಸೂರ್ಯ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ 17 ಮಂದಿ ಯುವ ಸಂಸದರ ಪಟ್ಟಿಯಲ್ಲಿರುವ ರಾಜ್ಯದ ಕಿರಿಯ ಸಂಸದರಾಗಿದ್ದಾರೆ.
ಬಿಜೆಪಿಯ ಅನಂತಕುಮಾರ್ ಅವರು ಸ್ಪರ್ಧಿಸುತ್ತಿದ್ದು, ಅಕಾಲಿಕ ಮರಣ ಹೊಂದಿದರು. ಲೋಕಸಭಾ ಚುನಾವಣೆ ಸಂದರ್ಭ ಬೆಂಗಳೂರು ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ ಅವರ ಸೋದರನ ಪುತ್ರ ಹಾಗೂ ವಕೀಲ ತೇಜಸ್ವಿ ಸೂರ್ಯ ಅಭ್ಯರ್ಥಿ ಎಂದು ಬಿಜೆಪಿ ಹೈಕಮಾಂಡ್ ಬಿ ಫಾರ್ಮ್ ನೀಡಿತು. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕೊನೆ ಕ್ಷಣದಲ್ಲಿ ತೇಜಸ್ವಿ ಸೂರ್ಯ ಹೆಸರು ಪ್ರಕಟವಾಗಿತ್ತು.ತೇಜಸ್ವಿ ಸೂರ್ಯ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರಿಗಿಂತ ಅತಿ ಹೆಚ್ಚು ಮತಗಳನ್ನು ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಜಮ್ಮುವಿನ ಲಡಾಕ್ ಲೋಕಸಭಾ ಕ್ಷೇತ್ರದ ಬಿಜೆಪಿಯ ಜಮ್ಯಂಗ್ ಶೆರಿಂಗ್ ನಂಗ್ಯಾಲ್ (33), ಬಿಹಾರದ ಸಿವಾನ್ ಲೋಕಸಭಾ ಕ್ಷೇತ್ರದ ಜೆಡಿಯು ಕವಿತಾ ಸಿಂಗ್ (29), ಉತ್ತರಪ್ರದೇಶದ ಸಂತ ಕಬೀರ್ ನಗರ ಲೋಕಸಭಾ ಕ್ಷೇತ್ರದ ಬಿಜೆಪಿಯ ಪ್ರವೀಣ್ ಕುಮಾರ್ ನಿಶಾದ್ (30), ಪಶ್ಚಿಮ ಬಂಗಾಳ ಬಾಸಿರತ್ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಪಕ್ಷದನುಸ್ರತ್ ಜಹಾನ್ ರುಹಿ (29), ಪಶ್ಚಿಮ ಬಂಗಾಳದ ಜಾದವ್ ಪುರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಪಕ್ಷದ ಮಿಮಿ ಚಕ್ರವರ್ತಿ (30), ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಪಕ್ಷದ ಅಭಿಷೇಕ್ ಬ್ಯಾನರ್ಜಿ (31), ಆಂಧ್ರಪ್ರದೇಶದ ಅರಕು ಲೋಕಸಭಾ ಕ್ಷೇತ್ರದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಗೊಡ್ಡೇತಿ ಮಾಧವಿ (26), ಮಹಾರಾಷ್ಟ್ರದ ನಂದುರ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿಯ ಹೀನಾ ಗಾವಿತ್ (31), ಸಿಕ್ಕಿಂ ರಾಜ್ಯದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷದ ಇಂದ್ರ ಹಂಗ್ ಸುಬ್ಬಾ (30), ಕೇರಳದ ಅಲತ್ತೂರು ಲೋಕಸಭಾ ಕ್ಷೇತ್ರದ ರಮ್ಯಾ ಹರಿದಾಸ್ (32), ಆಂಧ್ರಪ್ರದೇಶದ ಶ್ರೀಕಾಕುಳಂ ಲೋಕಸಭಾ ಕ್ಷೇತ್ರದ ಟಿಡಿಪಿ ಪಕ್ಷದ ಕಿಂಜಾರಪು ರಾಮಮೋಹನ್ ನಾಯ್ಡು (32), ಮಧ್ಯಪ್ರದೇಶದ ಶಾಹದೋಲ್ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಿಮಾದ್ರಿ ಸಿಂಗ್ (32), ಮಹಾರಾಷ್ಟ್ರದ ರಾವೇರ್ ಲೋಕಸಭಾ ಕ್ಷೇತ್ರದ ಬಿಜೆಪಿಯ ರಕ್ಷಾ ಖಂಡ್ಸೆ (32), ಮಹಾರಾಷ್ಟ್ರದ ಕಲ್ಯಾಣ ಲೋಕಸಭಾ ಕ್ಷೇತ್ರದ ಶಿವಸೇನಾ ಪಕ್ಷದ ಶ್ರೀಕಾಂತ್ ಏಕಾಂತ್ ಸಿಂಧೆ (27) ಲೋಕಸಭೆಗೆ ಪ್ರವೇಶ ಪಡೆಯುತ್ತಿರುವ ಯುವ ಸಂಸದರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.