ಚೆನ್ನೈ: ಅಜಾಗರೂಕತೆಯ ವಾಹನ ಚಾಲನೆ ಪ್ರಶ್ನಿಸಿದ್ದಕ್ಕೆ ಆರಂಭವಾದ ಜಗಳದಲ್ಲಿ ಪರಿಶಿಷ್ಟ ಜಾತಿಯ 17 ವರ್ಷದ ಯುವಕನಿಗೆ, ಪ್ರಭಾವಿ ಮರವರ ಜಾತಿಯ ಯುವಕರ ಗುಂಪು ಮಚ್ಚುಗಳು ಹಾಗೂ ಬಿಯರ್‌ನ ಖಾಲಿ ಬಾಟಲಿಗಳಿಂದ ತೀವ್ರವಾಗಿ ಹಲ್ಲೆ ಮಾಡಿದ ಕೃತ್ಯ ತಿರುನೆಲ್ವೆಲಿಯಲ್ಲಿ ನಡೆದಿದೆ
ಪಟ್ಣಣದ ಮೆಲಪಟ್ಟಂನಲ್ಲಿ ಯುವಕನ ಮನೆಯಲ್ಲಿಯೇ ಹಲ್ಲೆ ನಡೆದಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಯುವಕ ಮನೋಜ್‌ಕುಮಾರ್ ಎಂಬಾತನನ್ನು ತಿರುನೆಲ್ವೆಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ದ್ವಿತೀಯ ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿ. ತಂದೆ ಚಿನ್ನದೊರೈ ಮೇಸ್ತ್ರಿ ಆಗಿದ್ದು, ತಾಯಿ ಸುಗಂತಿ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾರೆ ಕೃತ್ಯ ನಡೆದಾಗ ಇಬ್ಬರೂ ಕೆಲಸಕ್ಕೆ ಹೋಗಿದ್ದರು.
ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ತಿರುಮಲೈ ಕೋಜುಂದುಪುರಂ ಗ್ರಾಮದ ಸುಮಾರು 10 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ನಾಲ್ವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರರ ಬಂಧನಕ್ಕೆ ಶೋಧ ನಡೆದಿದೆ ಎಂದೂ ತಿಳಿಸಿದ್ದಾರೆ.
ರಾಜ್ಯದಲ್ಲಿ ಮರವರ, ಅಗಮುಂಡೈಯರ ಮತ್ತು ಕಲ್ಲರ ಜಾತಿಯವರು ಒಬಿಸಿ ವರ್ಗದಲ್ಲಿ ಬರಲಿದ್ದು, ಒಟ್ಟಾಗಿ ಮುಕುಲೇತರರು ಎಂದು ಗುರುತಿಸಲಾಗುತ್ತದೆ. ತಮಿಳುನಾಡಿನ ಕೇಂದ್ರ ಮತ್ತು ದಕ್ಷಿಣ ಪ‍್ರಾಂತ್ಯದಲ್ಲಿ ಈ ವರ್ಗದವರು ಪ್ರಾಬಲ್ಯ ಹೊಂದಿದ್ದಾರೆ. ರಾಜಕೀಯವಾಗಿಯೂ ಪ್ರಬಲರಾಗಿದ್ದಾರೆ.
ಮನೋಜ್ ಕುಮಾರ್ ಸೋಮವಾರ ಮಧ್ಯಾಹ್ನ ಮನೆಗೆ ಬರುವಾಗ ಕಾರೊಂದು ಹತ್ತಿರವೇ ಹಾದುಹೋಗಿದೆ. ಆಗ ಕಾರಿನಲ್ಲಿದ್ದವರಿಗೆ ಜಾಗ್ರತೆಯಿಂದ ಚಾಲನೆ ಮಾಡಲು ಎಚ್ಚರಿಸಿದ್ದಾನೆ. ಇದೇ ಜಗಳಕ್ಕೆ ನಾಂದಿಯಾಗಿದೆ. ಮಧ್ಯಪ್ರವೇಶಿಸಿದ್ದ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಆದರೆ, ಒಂದು ಗಂಟೆಯ ಬಳಿಕ ಒಂಭತ್ತು ಜನರ ಗುಂಪು ವಿದ್ಯಾರ್ಥಿಯ ಮನೆಗೇ ನುಗ್ಗಿದ್ದು, ಮಚ್ಚು ಮತ್ತು ಗಾಜಿನ ಬಾಟಲಿಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದು, ತೀವ್ರವಾಗಿ ರಕ್ತಸ್ರಾವವಾಗಿದೆ. ಆರು ಯುವಕರು ಎರಡು ಬೈಕ್‌ಗಳಲ್ಲಿ ಗ್ರಾಮಕ್ಕೆ ಬರುತ್ತಿರುವುದು ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ.
ಯುವಕನ ತಾಯಿ ಸುಗಂತಿ ಅವರು, ‘ಪರಿಶಿಷ್ಟರು ನಿತ್ಯ ತಾರತಮ್ಯವಾಗುತ್ತಿದೆ. ನನ್ನ ಮಗ ಮಾಡಿದ ತಪ್ಪೇನು? ಖಾಲಿ ಬಾಟಲಿಯಿಂದ ಹಲ್ಲೆ ಮಾಡಿದ್ದು ತಲೆ, ಕಾಲಿಗೆ ತೀವ್ರ ಪೆಟ್ಟಾಗಿದೆ. ಅವರು ಮನುಷ್ಯರಾ? ಮಗ ಮತ್ತು ಅವರಿಗೆ ಹಳೆ ವೈರತ್ವವೂ ಇರಲಿಲ್ಲ. ನಮ್ಮಂತವರಿಗೆ ರಕ್ಷಣೆ ಎಲ್ಲಿದೆ’ ಎಂದು ಪ‍್ರಶ್ನಿಸಿದರು.
ತಿರುನೆಲ್ವೆಲಿ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಜಾತಿ ಆಧಾರಿತ ಕಲಹಗಳು ಕಾಲೇಜು ತರಗತಿಗಳ ಒಳಗೆ ಮತ್ತು ಹೊರಗೆ ಹೆಚ್ಚುತ್ತಿವೆ. ತಿರುನೆಲ್ವೇಲಿ, ತೂತುಕುಡಿ, ತೆಂಕಾಸಿ ಜಿಲ್ಲೆಗಳ ಬಹುತೇಕ ಎಲ್ಲ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಸೂಚಕ ಬಾವುಟಗಳು ಗಮನಸೆಳೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.