ಪಟ್ನಾ(ಬಿಹಾರ):ಮಹಿಳಾ ಸಹೋದ್ಯೋಗಿಯ ಸಾವಿನ ಬಳಿಕ ಶುಕ್ರವಾರ ಭಾರಿ ಪ್ರಮಾಣದಲ್ಲಿ ಧ್ವಂಸಮತ್ತು ಹಿಂಸಾಚಾರ ನಡೆಸಿದ ಸಂಬಂಧ ಮಹಿಳಾ ಸಿಬ್ಬಂದಿ ಸೇರಿದಂತೆ 175 ಪೊಲೀಸರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತರಬೇತಿನಿರತ 167 ಮಂದಿ ಸೇರಿದಂತೆ ಇತರ ಪೊಲೀಸರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಪಟ್ನಾ ವಲಯದ ಐಜಿಪಿ ನಯ್ಯರ್ ಹಸೈನ್ ಖಾನ್ ಭಾನುವಾರ ತಿಳಿಸಿದ್ದಾರೆ.
ಘಟನೆಯ ಕುರಿತು ತನಿಖೆಗೆ ಸೂಚಿಸಲಾಗಿದೆ. ಅಶಿಸ್ತು ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ಇತರ 23 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಖಾನ್ ಹೇಳಿದ್ದಾರೆ.
ವಜಾ ಮಾಡಿದ ಕಾನ್‌ಸ್ಟೆಬಲ್‌ಗಳಲ್ಲಿ ಅರ್ಧದಷ್ಟು ತರಬೇತಿನಿರತ ಮಹಿಳೆಯರಿದ್ದಾರೆ. ವಜಾಗೊಂಡವರಲ್ಲಿ ಇಬ್ಬರು ಮುಖ್ಯ ಪೊಲೀಸ್ ಮತ್ತು ಇತರ ಇಬ್ಬರು ತರಬೇತಿ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ಇದ್ದಾರೆ ಎಂದು ಐಜಿಪಿ ಹೇಳಿದ್ದಾರೆ.
ಐಜಿಪಿ ಅವರು ಅನುಮೋದನೆ ನೀಡಿದ ಬಳಿಕ ಪೊಲೀಸರನ್ನು ವಜಾ ಮತ್ತು ಅಮಾನತು ಮಾಡಲಾಗಿದೆ ಎಂದು ಪಟ್ನಾ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮನು ಮಹಾರಾಜ್ ಹೇಳಿದ್ದಾರೆ.
ಘಟನೆ ವಿವರ
ಕರ್ತವ್ಯದ ವೇಳೆ ಉಂಟಾದ ಗಂಭೀರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳಾ ಪೊಲಿಸ್ ಸವಿತಾ ಪಾಠಕ್(22) ಅವರು ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಸವಿತಾ ಪಾಠಕ್ ಅವರಿಗೆ ಅನಾರೋಗ್ಯದ ಇದ್ದಾಗಲೂ ಹಿರಿಯ ಅಧಿಕಾರಿಗಳು ಕರ್ತ್ಯವ್ಯಕ್ಕೆ ನಿಯೋಜಿಸಿದ್ದಾರೆ ಎಂದು ಆರೋಪಿಸಿ ತರಬೇತಿನಿತರ ಪೊಲೀಸರು ರಸ್ತೆಯಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಲೈನ್ ಮತ್ತು ವಾಹನಗಳಿಗೆ ಹಾನಿ ಮಾಡಿದ್ದಾರೆ.
ಹಿಂಸಾ ಕೃತ್ಯಕ್ಕಿಳಿದವರನ್ನು ನಿಯಂತ್ರಿಸುವ ಹಾಗೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಹಿರಿಯ ಅಧಿಕಾರಿಗಳಿಗೆ ಹಲವು ಗಂಟೆಗಳೇ ಬೇಕಾದವು.
ಡೆಂಗಿಯಿಂದಾಗಿ ಸವಿತಾ ಪಾಠಕ್ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ಆಸ್ಪತ್ರೆಗೆ ದಾಖಲಾದ ಬಳಿಕ ರಕ್ತದ ಮಾದರಿಯನ್ನು ಪಡೆದು ಡೆಂಗಿ ಪರೀಕ್ಷೆ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
‘ಸವಿತಾ ಪಾಠಕ್ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈ ಸಂಬಂಧ ಅವರು ಅಕ್ಟೋಬರ್‌ನಲ್ಲಿ ಮೂರು ದಿನ ವೈದ್ಯಕೀಯ ರಜೆ ಪಡೆದಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಅನಾರೋಗ್ಯದಲ್ಲಿದ್ದಾಗ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಬಾರದು’ ಎಂದು ಐಜಿಪಿ ಹೇಳಿದ್ದಾರೆ.
ಘಟನೆ ಸಂಬಂಧ ನಾಲ್ಕು ಎಫ್‌ಐಆರ್ ದಾಖಲಾಗಿವೆ.
ಘಟನೆಯ ಬಗ್ಗೆ ವಿವರವಾದ ವರದಿ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪೊಲೀಸ್ ಮಹಾ ನಿರ್ದೇಶಕ ಕೆ.ಎಸ್.ದ್ವಿವೇದಿ ಅವರಿಗೆ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.