ADVERTISEMENT

ಉನ್ನಾವ್‌ | ಬಸ್, ಟ್ಯಾಂಕರ್‌ ನಡುವೆ ಡಿಕ್ಕಿ: 18 ಸಾವು, 19 ಜನರಿಗೆ ಗಾಯ

ಪಿಟಿಐ
Published 10 ಜುಲೈ 2024, 3:20 IST
Last Updated 10 ಜುಲೈ 2024, 3:20 IST
<div class="paragraphs"><p>ಟ್ಯಾಂಕರ್‌ ಅಪಘಾತ (ಸಾಂಕೇತಿಕ ಚಿತ್ರ)</p></div>

ಟ್ಯಾಂಕರ್‌ ಅಪಘಾತ (ಸಾಂಕೇತಿಕ ಚಿತ್ರ)

   

ಉನ್ನಾವೊ: ಡಬಲ್‌ ಡೆಕ್ಕರ್‌ ಸ್ಲೀಪರ್‌ ಬಸ್‌, ಹಾಲಿನ ಟ್ಯಾಂಕರ್‌ಗೆ ಗುದ್ದಿದ ಪರಿಣಾಮ 18 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡ ಘಟನೆ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮುಂಜಾನೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಜೋಜಿಕೋಟ ಗ್ರಾಮದ ಸಮೀಪ ಈ ದುರಂತ ನಡೆದಿದೆ.

ADVERTISEMENT

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗೌರಂಗ್‌ ರಾಠಿ ಅವರು, ‘ಬಿಹಾರದ ಮೋತಿಹಾರಿಯಿಂದ ದೆಹಲಿಯತ್ತ ತೆರಳುತ್ತಿದ್ದ ಬಸ್‌, ಹಾಲಿನ ಟ್ಯಾಂಕರ್‌ಗೆ ಹಿಂದಿನಿಂದ ಗುದ್ದಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

‘ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಎಸ್‌.ಬಿ. ಶಿರಾದ್ಕರ್‌ ಅವರು, ‘ಮೃತರಲ್ಲಿ 14 ಮಂದಿ ಪುರುಷರು, ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದೆ’ ಎಂದು ತಿಳಿಸಿದರು.

‘ವೇಗವಾಗಿ ಬಂದ ಬಸ್‌ ಗುದ್ದಿದ ರಭಸಕ್ಕೆ ಬಸ್‌ ಮತ್ತು ಟ್ಯಾಂಕರ್‌ ಎರಡೂ ಮಗುಚಿ ಬಿದ್ದಿವೆ. ಅಪಘಾತದಲ್ಲಿ ಚಾಲಕರಿಬ್ಬರೂ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮೃತರ ಪೈಕಿ 14 ಮಂದಿಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವರಲ್ಲಿ ಬಹುತೇಕರು ಶಿವಗಢದ ನಿವಾಸಿಗಳು. ಅಪಘಾತದಿಂದ ಬಸ್‌ ಮತ್ತು ಟ್ಯಾಂಕರ್‌ನ ಬಹುತೇಕ ಭಾಗ ನಜ್ಜುಗುಜ್ಜಾಗಿದೆ.

‘ನಿದ್ದೆಯಲ್ಲಿದ್ದಾಗ ದುರಂತ’:

ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕ ಮೊಹದ್‌ ಶಮಿಮ್‌, ‘ನಾನು ನಿದ್ರಿಸುತ್ತಿದ್ದೆ. ಏನಾಯಿತು ಎಂದು ತಿಳಿಯಲಿಲ್ಲ’ ಎಂದು ಹೇಳಿದರು.

ಮತ್ತೊಬ್ಬ ಪ್ರಯಾಣಿಕ ದಿಲ್‌ಶಾದ್‌, ‘ಕುಟುಂಬದ ಎಂಟು ಮಂದಿ ಪ್ರಯಾಣಿಸುತ್ತಿದ್ದೆವು. ಆರು ಜನರ ಹಣೆಬರಹ ಏನಾಗಿದೆ ಗೊತ್ತಿಲ್ಲ’ ಎಂದು ದುಃಖ ವ್ಯಕ್ತಪಡಿಸಿದರು.

ಇದೇ ವೇಳೆ, ಅಪಘಾತ ನಡೆದ ಸ್ಥಳಕ್ಕೆ ಬಂದವರು ನಮ್ಮನ್ನು ರಕ್ಷಿಸುವುದು ಬಿಟ್ಟು, ವಿಡಿಯೊ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.