ಮುಂಬೈ: ಎಡೆಬಿಡದೆ ಸುರಿದ ಮಹಾಮಳೆಗೆ ಮಹಾರಾಷ್ಟ್ರದಲ್ಲಿ ಒಟ್ಟು 35 ಮಂದಿ ಮೃತಪಟ್ಟಿದ್ದಾರೆ.
ಮುಂಬೈನಲ್ಲಿ 21 ಮಂದಿ ಹಾಗೂ ರಾಜ್ಯದ ಉಳಿದ ಭಾಗಗಳಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.
ಮುಂಬೈ ಮಹಾನಗರದಲ್ಲಿ ಮಂಗಳವಾರ ಜನಜೀವನ ಬಹುತೇಕ ಅಸ್ತವ್ಯಸ್ತವಾಗಿತ್ತು. ವಾಣಿಜ್ಯ ರಾಜಧಾನಿಯ ಹಲವು ಭಾಗಗಳಲ್ಲಿ ನೀರು ನಿಂತಿತು.
ಮಹಾನಗರದಲ್ಲಿ ಭಾನುವಾರದಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರ ಬೆಳಗ್ಗಿನವರೆಗೆ ನಿಲ್ಲಲೇ ಇಲ್ಲ. ಹಾಗಾಗಿ ರೈಲು, ರಸ್ತೆ ಮತ್ತು ವಿಮಾನ ಸಂಚಾರ ಬಹುತೇಕ ಸ್ಥಗಿತವಾಗಿದೆ. ಮಂಗಳವಾರವೂ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರಿಂದಾಗಿ ಮುಂಬೈ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ರಜೆ ಘೋಷಿಸಲಾಗಿತ್ತು. ಜನರು ಮನೆಯಲ್ಲೇ ಉಳಿಯುವಂತೆ ಸರ್ಕಾರ ಸೂಚನೆ ಕೊಟ್ಟಿತ್ತು.
ಪುಣೆ ನಗರದ ಹೊರವಲಯದ ಅಂಬೇಗಾಂವ್ ಎಂಬಲ್ಲಿ ಸೋಮವಾರ ತಡರಾತ್ರಿ ಗೋಡೆ ಕುಸಿದು ಆರು ಕಾರ್ಮಿಕರು ಸತ್ತಿದ್ದಾರೆ. ಠಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಮಂಗಳವಾರಗೋಡೆ ಕುಸಿದು ಮೂವರು ಬಲಿಯಾಗಿದ್ದಾರೆ.
ಸಂಚಾರ ಸ್ಥಗಿತ
* ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ 70 ವಿಮಾನಗಳು ರದ್ದು, 70 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ
* ಸ್ಥಳೀಯ ರೈಲುಗಳಲ್ಲಿ ಸಿಲುಕಿಕೊಂಡ ಸಾವಿರಾರು ಜನರನ್ನು ರೈಲ್ವೆ ಸಿಬ್ಬಂದಿ ಮತ್ತು ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ
* ಹೆಚ್ಚಿನ ಸ್ಥಳೀಯ ರೈಲುಗಳನ್ನು ಮಂಗಳವಾರ ರದ್ದು ಮಾಡಲಾಗಿತ್ತು; ಅವುಗಳಲ್ಲಿ ಕೆಲವು ಸಂಜೆಯ ಹೊತ್ತಿಗೆ ಸಂಚಾರ ಆರಂಭಿಸಿವೆ
* ಮನೆ, ಕಟ್ಟಡಗಳಿಗೆ ನೀರು ನುಗ್ಗಿದ್ದಕ್ಕೆ ಸಂಬಂಧಿಸಿದ3,593 ದೂರುಗಳು ದಾಖಲಾಗಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.