ನವದೆಹಲಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ, ಕಾನೂನು ಸಂಘರ್ಷಕ್ಕೆ ಒಳಗಾದ ಆರೋಪಿ (ಬಾಲಾಪರಾಧಿ) ಎಂದು ಘೋಷಣೆಯಾಗಿದ್ದರೂ, ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶನಿವಾರ ಆದೇಶಿಸಿದೆ.
ಘಟನೆ ನಡೆದ ಸಮಯದಲ್ಲಿ ಜಾರಿಯಲ್ಲಿದ್ದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ–2000ರ ನಿಬಂಧನೆಗಳ ಪ್ರಕಾರ ಬಾಲಾಪರಾಧಿಯನ್ನು 3 ವರ್ಷಗಳ ನಂತರ ಬಂಧನದಲ್ಲಿಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ ರಾಮಸುಬ್ರಮಣಿಯನ್ ಅವರ ಪೀಠವು ತಿಳಿಸಿತು.
‘ಸುಮಾರು 18 ವರ್ಷ 9 ತಿಂಗಳ ಕಾಲ ಜೈಲಿನಲ್ಲಿ ಇದ್ದಿದ್ದಾಗಿ ಅರ್ಜಿದಾರರು ಹೇಳಿದ್ದಾರೆ. ಇದರಲ್ಲಿ ವಿವಾದವೇನಿಲ್ಲ. ಪ್ರತಿವಾದಿ ಮತ್ತು ಸರ್ಕಾರದ ಪರವಾಗಿ ಹಾಜರಾಗಿರುವ ವಕೀಲರು ಪ್ರಕರಣವನ್ನು ಪರಿಶೀಲಿಸಲು ಸಮಯ ಕೋರಿದ್ದಾರೆ. ಆದರೆ, 2014ರಲ್ಲಿ ಬಾಲ ನ್ಯಾಯಮಂಡಳಿಯು ಅರ್ಜಿದಾರರನ್ನು ಬಾಲಾಪರಾಧಿ ಎಂದು ಘೋಷಿಸಿದೆ. ಹೀಗಾಗಿ ವ್ಯಕ್ತಿಯನ್ನು ಬಂಧನದಲ್ಲಿ ಮುಂದುವರಿಸುವ ಪ್ರಶ್ನೆಯೇ ಇಲ್ಲ’ ಎಂದು ಪೀಠ ಹೇಳಿತು.
ವೈಯಕ್ತಿಕ ಬಾಂಡ್ ಆಧಾರದ ಮೇಲೆ ಅರ್ಜಿದಾರರಿಗೆ ತಕ್ಷಣವೇ ಮಧ್ಯಂತರ ಜಾಮೀನು ನೀಡಲು ಕೋರ್ಟ್ ಆದೇಶಿಸಿತು. ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸೂಚಿಸಿತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗಿದೆ. ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ. ಶಿಕ್ಷೆಯನ್ನು ಉನ್ನತ ನ್ಯಾಯಾಲಯವು ಎತ್ತಿಹಿಡಿದಿದೆ. ನಂತರ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಕ್ಷಮಾದಾನ ಅರ್ಜಿಯಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ವಿಚಾರಣೆ ನಡೆಯುತ್ತಿರುವಾಗ ಅಥವಾ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದಾಗ ಅರ್ಜಿದಾರ ತಾನು ಬಾಲಾಪರಾಧಿ ಎಂದು ಎಲ್ಲಿಯೂ ನಮೂದಿಸಿರಲಿಲ್ಲ ಎಂದು ಕೋರ್ಟ್‌ಗೆ ಇದಕ್ಕೂ ಮೊದಲು ಮಾಹಿತಿ ನೀಡಲಾಯಿತು.
ಆದರೆ, ಘಟನೆ ನಡೆದಾಗ ತಾನು ಅಪ್ರಾಪ್ತನಾಗಿದ್ದಾಗಿ ಅರ್ಜಿದಾರ ನಂತರದಲ್ಲಿ ವಾದಿಸಿದ್ದಾನೆ.
‘ಅರ್ಜಿದಾರ ಬಾಲಾಪರಾಧಿ ಎಂದು ಉತ್ತರ ಪ್ರದೇಶದ ಆಗ್ರಾದ ಬಾಲಾಪರಾಧಿ ನ್ಯಾಯ ಮಂಡಳಿಯು 2014ರ ಫೆಬ್ರುವರಿ 5ರ ತನ್ನ ಆದೇಶದಲ್ಲಿ ಘೋಷಿಸಿದೆ’ ಎಂದು ಪೀಠವು ಹೇಳಿತು.
2003ರ ಕೊಲೆ ಪ್ರಕರಣದಲ್ಲಿ ವ್ಯಕ್ತಿಯನ್ನು ವಿಚಾರಣಾ ನ್ಯಾಯಾಲಯವು ದೋಷಿ ಎಂದು ಘೋಷಿಸಿತ್ತು ಮತ್ತು ಮರಣದಂಡನೆಯನ್ನೂ ವಿಧಿಸಿತ್ತು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.