ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ಆಯ್ಕೆಯಾಗಿರುವ ಸುಮಾರು 5,300 ಶಿಕ್ಷಕರ ನೇಮಕಾತಿಗಳು ಅನುಮಾನಾಸ್ಪದವಾಗಿರುವುದರ ಕುರಿತ ಪಟ್ಟಿಯನ್ನು ಕಲ್ಕತ್ತ ಹೈಕೋರ್ಟ್‌ಗೆ ಸಲ್ಲಿಸಿರುವುದಾಗಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ತಿಳಿಸಿದೆ.
ಉಳಿದ ಸುಮಾರು 19,000 ಶಿಕ್ಷಕರು ಅರ್ಹರಾಗುವ ಸಾಧ್ಯತೆಯಿದೆ ಎಂದೂ ಅದು ಹೇಳಿದೆ.
ಹೈಕೋರ್ಟ್ ತೀರ್ಪಿನ ಕಾರಣದಿಂದ ಈ 19,000 ಶಿಕ್ಷಕರ ನೇಮಕಾತಿಗಳು ರದ್ದಾಗಿವೆ. ಆದರೆ, ಈ ಶಿಕ್ಷಕರು ಅರ್ಹ ಮಾನದಂಡಗಳನ್ನು ಪೂರೈಸಿ ನೇಮಕಗೊಂಡಿದ್ದಾರೆ ಎಂಬುದನ್ನು ಆಯೋಗ ನಂಬಿದೆ ಎಂದು ತಿಳಿಸಿದೆ.
‘ನೇಮಕಾತಿ ಕುರಿತು ಸಂಶಯ ಮೂಡಿದ ಅಭ್ಯರ್ಥಿಗಳ ಪಟ್ಟಿಯನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಒಎಂಆರ್ ಶೀಟ್‌ನಲ್ಲಿ ಅಕ್ರಮ ಎಸಗಿರುವ ಮತ್ತು ರ್‍ಯಾಂಕ್‌ನಲ್ಲಿ ಜಿಗಿತ ಆಗಿರುವವರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. 9–10 ಹಾಗೂ 11– 12ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕವಾಗಿರುವ ಸುಮಾರು 5,300 ಅಭ್ಯರ್ಥಿಗಳು ಇದರಲ್ಲಿದ್ದಾರೆ’ ಎಂದು ಎಸ್‌ಎಸ್‌ಸಿ ಅಧ್ಯಕ್ಷ ಸಿದ್ಧಾರ್ಥ ಮಜುಂದಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯಮಟ್ಟದ ಆಯ್ಕೆ ಪರೀಕ್ಷೆ ಮೂಲಕ 2016ರಲ್ಲಿ ನಡೆಸಿದ್ದ 25,753 ಶಿಕ್ಷಕರ ನೇಮಕಾತಿಯನ್ನು ಕಲ್ಕತ್ತ ಹೈಕೋರ್ಟ್ ಇತ್ತೀಚೆಗೆ ರದ್ದುಪಡಿಸಿತ್ತು. ಅಲ್ಲದೆ ನೇಮಕವಾಗಿದ್ದವರು ಇಲ್ಲಿಯವರೆಗೆ ಪಡೆದಿರುವ ವೇತನದ ಮೊತ್ತವನ್ನು ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು.
Cut-off box - ಶಿಕ್ಷಕರ ನೇಮಕ ರದ್ದು: ಘೋರ ಅನ್ಯಾಯ– ಮಮತಾ ಕೇಶಿಯಾರಿ (ಪಶ್ಚಿಮ ಬಂಗಾಳ ಪಿಟಿಐ): ಸುಮಾರು 25000 ಶಾಲಾ ಶಿಕ್ಷಕರ ಉದ್ಯೋಗಗಳನ್ನು ರದ್ದುಪಡಿಸಿರುವುದನ್ನು ಘೋರ ಅನ್ಯಾಯ ಎಂದು ಹೇಳಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಮಾಡಲು ಬಿಜೆಪಿ ಈ ತಂತ್ರ ಮಾಡಿದೆ ಎಂದು ಗುರುವಾರ ಆರೋಪಿಸಿದರು. ಮೇದಿನಿಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಇಷ್ಟೊಂದು ಶಿಕ್ಷಕರು ಕೆಲಸ ಕಳೆದುಕೊಂಡ ಬಳಿಕ ಆ ಶಾಲೆಗಳನ್ನು ನಡೆಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು. ‘ನೇಮಕಾತಿ ಪ್ರಕ್ರಿಯೆಯಲ್ಲಿ ಯಾರಾದರೂ ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಬಹುದಿತ್ತು. ಅದು ಬಿಟ್ದು ಉದ್ಯೋಗ ಕಸಿದುಕೊಳ್ಳುವುದು ಘೋರ ಅನ್ಯಾಯ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ‘ಇದು ಬಿಜೆಜಿಯ ಕುತಂತ್ರವಾಗಿದ್ದು ನನಗೆ ನ್ಯಾಯಾಂಗದ ಮೇಲೆ ಗೌರವವಿದೆ’ ಎಂದು ಬ್ಯಾನರ್ಜಿ ತಿಳಿಸಿದರು. ‘ಉದ್ಯೋಗ ಕಳೆದುಕೊಂಡ ಈ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ಆಗುವುದಿಲ್ಲ. ಈ ಕಾರ್ಯಕ್ಕೆ ಕೇಂದ್ರ ಸರ್ಕಾರಿ ನೌಕರರನ್ನು ತೊಡಗಿಸಿಕೊಳ್ಳಬಹುದು. ಅವರು ಕೇಸರಿ ಪಾಳಯದವರ ಆದೇಶದಂತೆ ಕೆಲಸ ಮಾಡುತ್ತಾರೆ’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು. ಕ್ರಮ ಕೈಗೊಳ್ಳುವಂತೆ ವಕೀಲರ ಮೊರೆ: ಮಮತಾ ಬ್ಯಾನರ್ಜಿ ಅವರು ಸತತವಾಗಿ ಈ ವಿಷಯದಲ್ಲಿ ಆರೋಪ ಮಾಡುತ್ತಿರುವುದನ್ನು ಕೆಲವು ವಕೀಲರು ಖಂಡಿಸಿದ್ದು ಅವರ ವಿರುದ್ಧ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ವಕೀಲ ಬಿಕಾಸ್ ರಂಜನ್ ಭಟ್ಟಾಚಾರ್ಯ ಅವರು ಮಮತಾ ಹೇಳಿಕೆಗಳು ಪ್ರಕಟವಾಗಿರುವ ಪತ್ರಿಕೆಗಳ ತುಣುಕುಗಳನ್ನು ಅಡಕ ಮಾಡಿದ ಅಫಿಡವಿಟ್ ಸಲ್ಲಿಸಿದರು.
ಶಿಕ್ಷಣ ಸಚಿವರ ನಿಕಟವರ್ತಿಯ ವಿಚಾರಣೆ : ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಸಂತು ಗಂಗೂಲಿ ಅವರನ್ನು ಸಿಬಿಐ ಗುರುವಾರ ವಿಚಾರಣೆಗೆ ಒಳಪಡಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಂತು ಗಂಗೂಲಿ ಅವರು ಚಟರ್ಜಿ ಅವರ ಆಪ್ತ ಸಹಾಯಕರಾಗಿದ್ದು ನೇಮಕಾತಿಗೆ ಸಂಬಂಧಿಸಿದಂತೆ ಜನರೊಂದಿಗೆ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
‘ಕೆಲಸ ಕಳೆದುಕೊಂಡವರಿಗೆ ಏಪ್ರಿಲ್ ವೇತನ’
ಕಲ್ಕತ್ತ ಹೈಕೋರ್ಟ್ ತೀರ್ಪಿನಿಂದ ನೇಮಕಾತಿ ರದ್ದುಗೊಂಡಿರುವ 25753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಏಪ್ರಿಲ್ ತಿಂಗಳ ವೇತನ ಪಾವತಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ತಿಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು ಆ ಕುರಿತು ತೀರ್ಪು ಬರುವವರೆಗೆ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ಈ ಸಿಬ್ಬಂದಿ ಏಪ್ರಿಲ್‌ನಲ್ಲಿ ಬಹುತೇಕ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ವೇತನವನ್ನು ಪಾವತಿಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.