ತೇಜ್‌ಪುರ: ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಲ್ಲಿ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ತೋಪು ಹೊಗೆ ಬಾಂಬ್ (mortar smoke bomb) ಪತ್ತೆಯಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಈ ಬಾಂಬ್ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಸಂಜೆ ಜೌಗಾಪುರ ಗ್ರಾಮದ ವ್ಯಕ್ತಿಯೊಬ್ಬರು ಸೇಸಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ 2 ಇಂಚು ಉದ್ದದ ಸ್ಫೋಟಕವನ್ನು ಪತ್ತೆ ಮಾಡಿದ್ದಾರೆ ಎಂದು ಸೋನಿತ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಬರುನ್ ಪುರಕಾಯಸ್ಥ ತಿಳಿಸಿದ್ದಾರೆ.
ಈ ಪ್ರದೇಶವು ಮಿಸಾಮಾರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಈ ಸ್ಫೋಟಕವನ್ನು ಚೀನಾ ಉತ್ಪಾದಿಸಿದ್ದು, 1962ರ ಯುದ್ಧ ಕಾಲದ್ದು ಎಂದು ಅವರು ಹೇಳಿದ್ದಾರೆ.
ಮಾರ್ಟರ್ ಸ್ಮೋಕ್ ಬಾಂಬ್ ಎನ್ನುವುದು ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಥವಾ ಶತ್ರುಗಳ ಕಣ್ಗಾವಲು ತಪ್ಪಿಸಲು ಹೊಗೆ ಪರದೆಯನ್ನು ರಚಿಸುವಂತಹ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಒಂದು ರೀತಿಯ ಸ್ಫೋಟಕ.
ಲೆಫ್ಟಿನೆಂಟ್ ಕರ್ನಲ್ ಅಭಿಜಿತ್ ಮಿಶ್ರಾ ನೇತೃತ್ವದಲ್ಲಿ ಮಿಸಾಮಾರಿ ಶಿಬಿರದ ಸೇನಾ ತಂಡದ ಸಹಾಯದಿಂದ ಇದನ್ನು ಸುರಕ್ಷಿತವಾಗಿ ಸ್ಫೋಟಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.