ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಐದು ವರ್ಷ ಜೈಲು ಶಿಕ್ಷೆಗೊಳಗಾಗಿದ್ದ 89ರಲ್ಲಿ 70 ಜನರ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.
ಎಲ್ಲಾ ಶಿಕ್ಷಿತರು ಜೈಲು ಶಿಕ್ಷೆ ಎದುರಿಸಲು ನಾಲ್ಕು ವಾರಗಳ ಒಳಗಾಗಿ ಶರಣಾಗಬೇಕು ಎಂದು ನ್ಯಾಯಮೂರ್ತಿ ಆರ್.ಕೆ. ಗೌಬಾ ನಿರ್ದೇಶಿಸಿದ್ದಾರೆ.
ಗಲಭೆ ವೇಳೆ ಮನೆಗಳಿಗೆ ಬೆಂಕಿ ಹಚ್ಚಿದ ಹಾಗೂ ಕರ್ಫ್ಯೂ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದ 89 ಜನರಿಗೆ ವಿಚಾರಣಾ ನ್ಯಾಯಾಲಯ 1996ರ ಆ.27ರಂದು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಪರಾಧಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. 22 ವರ್ಷಗಳ ಹಿಂದಿನ ಈ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ.
ಮೇಲ್ಮನವಿ ಸಲ್ಲಿಸಿದ್ದ 89ರಲ್ಲಿ 16 ಜನರು ವಿಚಾರಣೆ ನಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾದ ಕಾರಣ ಅವರ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇಷ್ಟು ವರ್ಷ ವಿಚಾರಣೆ ನಡೆದ ಅವಧಿಯಲ್ಲಿ, ಮೇಲ್ಮನವಿ ಸಲ್ಲಿಸಿದ್ದ ಆರೋಪಿಗಳಲ್ಲಿ ಹಲವರುಮೃತಪಟ್ಟಿದ್ದಾರೆ. ಇವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
**
ದೊಡ್ಡ ಮೀನುಗಳು ಇನ್ನೂ ಸ್ವತಂತ್ರವಾಗಿವೆ. ಗಲಭೆ ಸಂತ್ರಸ್ತರಿಗೆ ಈವರೆಗೂ ನ್ಯಾಯ ದೊರಕಿಲ್ಲ.
-ಅರವಿಂದ್ ಕೇಜ್ರಿವಾಲ್,ದೆಹಲಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.