ADVERTISEMENT

ಸಿಖ್‌ ವಿರೋಧಿ ಗಲಭೆ: 88 ಅಪರಾಧಿಗಳ ಜೈಲು ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

ಏಜೆನ್ಸೀಸ್
Published 28 ನವೆಂಬರ್ 2018, 10:47 IST
Last Updated 28 ನವೆಂಬರ್ 2018, 10:47 IST
   

ನವದೆಹಲಿ: 22 ವರ್ಷಗಳ ಹಿಂದೆ ಸಿಖ್‌ ವಿರೋಧಿಗಲಭೆ ಸಂಬಂಧ 88 ಅಪರಾಧಿಗಳಿಗೆ ಜೈಲು ಶಿಕ್ಷೆ ನೀಡಿದ್ದ ಸೆಷನ್ಸ್‌ ಕೋರ್ಟ್‌ ತೀರ್ಪನ್ನು ದೆಹಲಿ ಹೈಕೋರ್ಟ್‌ ಎತ್ತಿ ಹಿಡಿದಿದೆ.

1984ರ ಅಕ್ಟೋಬರ್ 31ರಂದು ಆಗಿನ ಪ್ರಧಾನಿ ಇಂದಿರಾಗಾಂಧಿಯನ್ನು ನಾಲ್ವರು ಸಿಖ್ಖರು ಹತ್ಯೆ ಮಾಡಿದರು. ಆದಾದ ನಂತರ ಸುಮಾರು ಐದು ದಿನಗಳ ಕಾಲ ವಿವಿಧ ಕಡೆಗಳಲ್ಲಿ ಸಿಖ್ಖರ ಮೇಲೆ ದಾಳಿ ನಡೆಯಿತು. ಈ ವೇಳೆ ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ನಡೆದ ಸಿಖ್‌ ವಿರೋಧಿ ಗಲಭೆ ಸಂಬಂಧ 107 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ 88 ಮಂದಿಗೆ ಜೈಲು ಶಿಕ್ಷೆ ನೀಡಿ 1996ರ ಆಗಸ್ಟ್‌ 27ರಂದು ಸೆಷನ್ಸ್‌ ಕೋರ್ಟ್‌ ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ 88 ಅಪರಾಧಿಗಳು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆ ಪ್ರಕರಣಈಗ ಇತ್ಯರ್ಥವಾಗಿದ್ದು, ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ.

ADVERTISEMENT

ತ್ರಿಲೋಕ್‌ಪುರಿ ಪ್ರಕರಣದ ಸಂಬಂಧ ದಾಖಲಾದ ಎಫ್‌ಐಆರ್ ಪ್ರಕಾರ, ‘ದೆಹಲಿ ಗಲಭೆಯಲ್ಲಿ 95 ಮಂದಿ ಮೃತಪಟ್ಟಿದ್ದು, ಸುಮಾರು 100 ಮನೆಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಗಲಭೆಯ ಸಂತ್ರಸ್ತರ ಪರ ಹಿರಿಯ ವಕೀಲರಾದ ಎಚ್‌.ಎಸ್‌. ಫೂಲ್ಕ ತಿಳಿಸಿದರು.

ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಸಿಖ್‌ ವಿರೋಧಿ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 3,325. ಈ ಪೈಕಿ ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ 2,733 ಮಂದಿ ಮೃತಪಟ್ಟಿದ್ದಾರೆ. ಸಿಖ್ ಹೋರಾಟಗಾರರ ಪ್ರಕಾರ ಗಲಭೆಗೆ ಬಲಿಯಾದವರ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚು ಎಂದರು.

ಅಪರಾಧಿಗಳೆಂದು ಘೋಷಣೆಯಾದ 88 ಮಂದಿಯ ಪೈಕಿ ಈಗ 47 ಜನ ಮಾತ್ರ ಬದುಕಿದ್ದು, ಅವರು ಶೀಘ್ರ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಕೋರ್ಟ್‌ ಸೂಚಿಸಿದೆ. ‘ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗಾಗಿ ಅವರು ಶರಣಾಗಲೇ ಬೇಕು’ ಎಂದು ವಕೀಲರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.