ADVERTISEMENT

ಸಿಖ್ ಗಲಭೆ: ಹೊಸ ನೋಟಿಸ್ ಜಾರಿ

ಪಿಟಿಐ
Published 6 ಜುಲೈ 2023, 15:30 IST
Last Updated 6 ಜುಲೈ 2023, 15:30 IST

ನವದೆಹಲಿ: ಪುಲ್ ಬಂಗಾಶ್‌ ಪ್ರದೇಶದಲ್ಲಿನ ಗಲಭೆಗೆ (1984ರ ಸಿಖ್ ವಿರೋಧಿ ಗಲಭೆ) ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ವಿರುದ್ಧದ ಪ್ರಕರಣದ ದಾಖಲೆಗಳನ್ನು ಹಾಜರುಪಡಿಸುವಂತೆ ವಿಚಾರಣಾ ನ್ಯಾಯಾಲಯದ ರೆಕಾರ್ಡ್‌ ರೂಂ ಉಸ್ತುವಾರಿಗೆ, ದೆಹಲಿ ನ್ಯಾಯಾಲಯ ಗುರುವಾರ ಹೊಸದಾಗಿ ನೋಟಿಸ್ ಜಾರಿಗೊಳಿಸಿದೆ.

‘ನ್ಯಾಯಾಲಯವು ವಿಚಾರಣೆ ನಡೆಸಲಿದ್ದು, ಶುಕ್ರವಾರ ಬೆಳಿಗ್ಗೆ 11ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಿ’ ಎಂದು ನ್ಯಾಯಾಲಯದ ರೆಕಾರ್ಡ್‌ ರೂಂನ ಉಸ್ತುವಾರಿಗೆ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ವಿಧಿ ಗುಪ್ತಾ ಆನಂದ್ ನೋಟಿಸ್ ಜಾರಿಗೊಳಿಸಿದ್ದಾರೆ.

ಮೇ 20ರಂದು ಟೈಟ್ಲರ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದ ಸಿಬಿಐ, ಅವರ ಧ್ವನಿ ಮಾದರಿ ಪರೀಕ್ಷೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಜ್ಞಾಪನಾ ಪತ್ರ ಕಳುಹಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ದಾಖಲೆಗಳನ್ನು ಕೋರ್ಟ್ ಜೂನ್ 30ರಂದು ಪರಾಮರ್ಶಿಸಿತ್ತು.

ADVERTISEMENT

‘ಇಂದಿರಾಗಾಂಧಿ ಹತ್ಯೆಯಾದ ಮರು ದಿನ, ಆಜಾದ್‌ ಮಾರುಕಟ್ಟೆಯಲ್ಲಿ ನೆರೆದಿದ್ದ ಜನಸಮೂಹವನ್ನು ಟೈಟ್ಲರ್ ಪ್ರಚೋದಿಸಿದ್ದರಿಂದಲೇ; ಉದ್ರಿಕ್ತಗೊಂಡ ಜನರ ಗುಂಪು ಪುಲ್ ಬಂಗಾಶ್‌ ಪ್ರದೇಶದಲ್ಲಿನ ಗುರುದ್ವಾರಕ್ಕೆ ಬೆಂಕಿ ಹಚ್ಚಿತು. ಠಾಕೂರ್ ಸಿಂಗ್, ಬಾದಲ್ ಸಿಂಗ್, ಗುರುಚರಣ್ ಸಿಂಗ್ ಹತ್ಯೆಗೂ ಕಾರಣವಾಯಿತು’ ಎಂದು ಸಿಬಿಐ, ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಟೈಟ್ಲರ್ ವಿರುದ್ಧ ಸಿಬಿಐ ಐಪಿಸಿ 302 (ಕೊಲೆ), ಸೆಕ್ಷನ್ 147 (ಗಲಭೆ), 109 (ಪ್ರಚೋದನೆ)ರಡಿ ಆರೋಪ ಹೊರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.