ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಮತ್ತು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಗುರುದ್ವಾರ ರಕಾಬ್‌ಗಂಜ್ ಸಾಹಿಬ್‌ನಿಂದ ಆರಂಭವಾದ ಮೆರವಣಿಗೆಗೆ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಪೊಲೀಸರು ತಡೆ ಒಡ್ಡಿದರು.
‘34 ವರ್ಷಗಳಿಂದ ನಮ್ಮ ಸಮುದಾಯ ನ್ಯಾಯದ ನಿರೀಕ್ಷೆಯಲ್ಲಿದೆ. ಸಾವಿರಾರು ಸಿಖ್ಖರ ಮಾರಣಹೋಮ ನಡೆದಿದೆ. ಆ ವೇಳೆ ಹಲವು ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು. ಸಾಕಷ್ಟು ಜನರು ಮನೆಗಳನ್ನು ಕಳೆದಿಕೊಂಡರು. ಇದು ಭಾರತ ಇತಿಹಾಸದ ಕಪ್ಪುಚುಕ್ಕೆ. ಯಾರಿಗೂ ಈವರೆಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಂಗ ಏಕೆ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬಾರದು?’ ಎಂದು ಹರ್‌ಸಿಮ್ರತ್ ಕೌರ್ ಪ್ರಶ್ನಿಸಿದ್ದಾರೆ.
ಸಿಖ್ ಸಮುದಾಯದ ಅಂಗರಕ್ಷಕರಿಂದ ಇಂದಿರಾ ಗಾಂಧಿ ಹತ್ಯೆಗೀಡಾದ ಬಳಿಕ ದೆಹಲಿ ಸೇರಿದಂತೆ ದೇಶದಾದ್ಯಂತ ಸಿಖ್ಖರ ಮಾರಣಹೋಮ ನಡೆದಿತ್ತು. ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಅಕಾಲಿದಳ ಹೋರಾಟ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.