ADVERTISEMENT

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣ; ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಪಿಟಿಐ
Published 30 ಮೇ 2022, 11:32 IST
Last Updated 30 ಮೇ 2022, 11:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಈಚೆಗೆ ಗುಜರಾತ್‌ನಲ್ಲಿ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳಿಗೆ ಸಿಬಿಐ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮುಂಬೈ ನಿವಾಸಿಗಳಾದ ಅಬು ಬಾಕರ್‌, ಸೈಯದ್‌ ಖುರೇಷಿ, ಮೊಹಮ್ಮದ್‌ ಶೋಯಿಬ್‌ ಖುರೇಷಿ ಮತ್ತು ಮೊಹಮ್ಮದ್‌ ಯೂಸುಫ್‌ ಇಸ್ಮಾಯಿಲ್‌ ಅವರನ್ನು ಮೇ 12 ರಂದು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ಬಂಧಿಸಿತ್ತು. ಬಳಿಕ ಬಂಧಿತರನ್ನು ಸರಣಿ ಬಾಂಬ್‌ ಸ್ಫೋಟ ಪ್ರಕರಣ ತನಿಖೆ ಸಂಬಂಧ ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಸಿಬಿಐನ ವಿಶೇಷ ನ್ಯಾಯಾಧೀಶರಾದ ಆರ್‌.ಆರ್‌.ಭೋಸಲೆ ಅವರ ಮುಂದೆ ನಾಲ್ವರು ಆರೋಪಿಗಳನ್ನು ಹಾಜರುಪಡಿಸಲಾಯಿತು. ಈ ವೇಳೆ ಆರೋಪಿಗಳನ್ನು ತಮ್ಮ ವಶದಲ್ಲಿಯೇ ಇಟ್ಟುಕೊಳ್ಳಲು ಇನ್ನಷ್ಟು ಅವಕಾಶ ಕೊಡಬೇಕೆಂಬ ಸಿಬಿಐನ ಮನವಿ ತಿರಸ್ಕರಿಸಿದ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ.

ADVERTISEMENT

ಆರೋಪಿಗಳು ತಮ್ಮ ಗುರುತು ಮರೆಮಾಚಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್‌ ತಯಾರಿಸಿಕೊಂಡು 29 ವರ್ಷಗಳಿಂದ ತಲೆ ಮರೆಸಿಕೊಂಡಿದರು. 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಾಲ್ವರು ಬೇಕಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಗುಜರಾತ್‌ ಪೊಲೀಸರು ಈಚೆಗೆ ಹೇಳಿದ್ದರು.

1993ರ ಮಾರ್ಚ್‌ನಲ್ಲಿ ಮುಂಬೈನಲ್ಲಿ 12 ಕಡೆ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದರು. 1400 ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.