ADVERTISEMENT

19ನೇ ಕಾರ್ಗಿಲ್‌ ವಿಜಯ್‌ ದಿವಸ್‌: ಬೋಫೋರ್ಸ್‌ ಫಿರಂಗಿಗಳ ಪ್ರದರ್ಶನ

ಏಜೆನ್ಸೀಸ್
Published 9 ಜುಲೈ 2019, 2:53 IST
Last Updated 9 ಜುಲೈ 2019, 2:53 IST
ಜಮ್ಮು ಕಾಶ್ಮಿರದ ಡ್ರಾನಲ್ಲಿರುವ ಕಾರ್ಗಿಲ್‌ ವಿಜಯ ಸ್ಮಾರಕ ಆವರಣದಲ್ಲಿ ಫಿರಂಗಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಚಿತ್ರ: ಎಎನ್‌ಐ ಟ್ವೀಟ್‌
ಜಮ್ಮು ಕಾಶ್ಮಿರದ ಡ್ರಾನಲ್ಲಿರುವ ಕಾರ್ಗಿಲ್‌ ವಿಜಯ ಸ್ಮಾರಕ ಆವರಣದಲ್ಲಿ ಫಿರಂಗಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಚಿತ್ರ: ಎಎನ್‌ಐ ಟ್ವೀಟ್‌   

ಶ್ರೀನಗರ:19ನೇ ‘ಕಾರ್ಗಿಲ್‌ ವಿಜಯ್‌ ದಿವಸ್‌’ ಆಚರಣೆಗೆ ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಡ್ರಾಸ್‌ನಲ್ಲಿ ಮಂಗಳವಾರ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಬೋಫೋರ್ಸ್‌ ಫಿರಂಗಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ಡ್ರಾಸ್‌ನಲ್ಲಿರುವ ವಿಜಯ ಸ್ಮಾರಕ ಆವರಣದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದ್ದು, ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಇದೇ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಈ ವಿಜಯೋತ್ಸವದಲ್ಲಿ ಬುಧವಾರ ‘ಅಪರೇಷನ್‌ ವಿಜಯ್‌ ಬ್ಯಾಟಲ್ಸ್‌’ ಮತ್ತು ಲೇಸರ್‌ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ. ಜುಲೈ 26ರ ಗುರವಾರ ಕೊನೆಯ ದಿನದ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಜುಲೈ 26ರಂದು ‘ವಿಜಯ್‌ ದಿವಸ್‌’ ಆಚರಿಸಲಾಗುತ್ತದೆ.

ADVERTISEMENT

19 ವರ್ಷಗಳ ಹಿಂದೆ ಭಾರತದ ಗಡಿಪ್ರದೇಶ ಕಾರ್ಗಿಲ್‌ನಲ್ಲಿ ಅಘೋಷಿತ ಯುದ್ಧವನ್ನು ಸಾರುವ ಮೂಲಕ ದೇಶದ ವೀರಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ತಾನಕ್ಕೆ ಭಾರತದ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದ ಇತಿಹಾಸದ ಪ್ರಯುಕ್ತ ‘ಕಾರ್ಗಿಲ್ ವಿಜಯೋತ್ಸವ’ವನ್ನು ಆಚರಿಸಲಾಗುತ್ತಿದೆ.

ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆದಿದ್ದು, ಪಾಕ್ ಸೇನೆ ವಿರುದ್ಧ ಭಾರತೀಯ ಸೇನೆ ಸೆಣಸಾಡಿತು. ಶ್ರೀನಗರದ ಲೇಹ್‌ನ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ವೇಳೆ ಸೇನೆಯ ಅಧಿಕಾರಿಗಳು ಸೇರಿದಂತೆ 490 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

ಶ್ರೀನಗರದಿಂದ 150 ಕಿ.ಮೀ.ದೂರದಲ್ಲಿರುವ ಡ್ರಾಸ್‌ಗೆ ತಲುಪಲು ಬರೋಬ್ಬರಿ 6-7ಗಂಟೆಯ ಪ್ರಯಾಣ. ನೀರವ ಮೌನ, ರುದ್ರರಮಣೀಯ ಅರಣ್ಯ, ಪರ್ವತ ತುದಿಗಳ ತಿರುವುಗಳಿರುವ ರಸ್ತೆ ಅದು. 19 ವರ್ಷಗಳ ಹಿಂದೆ ಕಾರ್ಗಿಲ್ ಸಮರದ ಸಮಯದಲ್ಲಿ ಭಾರತೀಯ ಸೇನೆಗೆ ಸೇರಿದ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಚಲಿಸಿದ್ದವು.

ಟೈಗರ್ ಹಾಗೂ ಟೊಲೊಲಿಂಗ್ ಪರ್ವತಗಳ ಮೇಲೆ ನಿಯಂತ್ರಣ ಸಾಧಿಸಲು ಡ್ರಾಸ್ ಮೈದಾನದಿಂದಲೇ ಭಾರತ ಯುದ್ಧ ಆರಂಭಿಸಿತ್ತು. ಪಾಕ್ ಪಡೆಗಳು ಲಡಾಖ್ ಪ್ರದೇಶದಿಂದ ಸಂಪರ್ಕ ಕಡಿಯಲು ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಕಾರ್ಗಿಲ್‌ ವಿಜಯ ಸ್ಮಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.