ADVERTISEMENT

ರಾಷ್ಟ್ರೀಯ ಲೋಕದಳ ನಾಯಕ ನಫೇ ಸಿಂಗ್ ರಾಠೀ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಪಿಟಿಐ
Published 4 ಮಾರ್ಚ್ 2024, 5:19 IST
Last Updated 4 ಮಾರ್ಚ್ 2024, 5:19 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಚಂಡೀಗಢ / ನವದೆಹಲಿ: ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ನಾಯಕ ನಫೇ ಸಿಂಗ್ ರಾಠೀ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆಶಿಶ್ ಹಾಗೂ ಸೌರಭ್ ಬಂಧಿತರು.

ಫೆಬ್ರುವರಿ 25 ರಂದು ನವದೆಹಲಿ ಸಮೀಪದ ಜಜ್ಜರ್ ಜಿಲ್ಲೆಯ ಬಹದ್ದೂರ್‌ಗಢದಲ್ಲಿ ನಫೇ ಸಿಂಗ್ ರಾಠೀ ಮತ್ತು ಪಕ್ಷದ ಕಾರ್ಯಕರ್ತ ಜೈ ಕಿಶನ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ಮಳೆಗರೆದಿದ್ದರು. ಘಟನೆಯಲ್ಲಿ ಇವರಿಬ್ಬರೂ ಮೃತಪಟ್ಟು ಅವರ ಭದ್ರತೆಗೆ ನಿಯೋಜಿಸಿದ್ದ ಮೂವರು ಗನ್‌ಮ್ಯಾನ್‌ಗಳು ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.

ADVERTISEMENT

‌‌‌ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ, ಜಿಲ್ಲಾ ಪೊಲೀಸರು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಗೋವಾದ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಸೋಮವಾರ ಮಧ್ಯಾಹ್ನದ ವೇಳೆಗೆ ಅವರನ್ನು ರಾಷ್ಟ್ರ ರಾಜಧಾನಿಗೆ ಕರೆತರಲಾಗುವುದು ಎಂದು ದೆಹಲಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಆಶಿಶ್, ಸೌರಭ್, ನಕುಲ್ ಮತ್ತು ಅತುಲ್ ಎಂಬ ನಾಲ್ವರು ಭಾಗಿಯಾಗಿದ್ದರು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ದೆಹಲಿ ಪೊಲೀಸ್ ವಿಶೇಷ ಕೋಶದ (ನೈಋತ್ಯ) ತಂಡವು ಗೋವಾದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಖಚಿತ ಮಾಹಿತಿ ಮೇರೆಗೆ ಇಬ್ಬರು ಶೂಟರ್‌ಗಳನ್ನು ‌ಬಂಧಿಸಲಾಗಿದೆ. ಅವರನ್ನು ಬಹದ್ದೂರ್‌ಗಢಕ್ಕೆ ಕರೆತರಲಾಗುವುದು ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ನಂಗ್ಲೋಯ್ ನಿವಾಸಿಗಳಾದ ಆಶಿಶ್ ಮತ್ತು ಸೌರಭ್ ಬ್ರಿಟನ್‌ ಮೂಲದ ದರೋಡೆಕೋರ ಕಪಿಲ್ ಸಾಂಗ್ವಾನ್‌ನ ಸಹಚರರು. ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ರಾಠೀ ಕೊಲೆ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ನಡೆದ ಐಎನ್‌ಎಲ್‌ಡಿ ನಾಯಕ ಹತ್ಯೆಗೆ ವಿರೋಧ ಪಕ್ಷಗಳು, ಮನೋಹರಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿವೆ.

ಘಟನೆಯ ನಂತರ ಎಫ್‌ಐಆರ್‌ನಲ್ಲಿ ಬಿಜೆಪಿಯ ಮಾಜಿ ಶಾಸಕ ನರೇಶ್ ಕೌಶಿಕ್ ಮತ್ತು ಇತರರನ್ನು ಜಜ್ಜರ್ ಪೊಲೀಸರು ಹೆಸರಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302 (ಕೊಲೆ), ಮತ್ತು ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರಿನಲ್ಲಿ ಹಿಂಬಾಲಿಸುತ್ತಿದ್ದ ಐವರು ಅಪರಿಚಿತ ಹಂತಕರು ಬರಾಹಿ ರೈಲ್ವೆ ಕ್ರಾಸಿಂಗ್ ಬಳಿ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ರಾಠೀ ಅವರ ಸೋದರಳಿಯ ರಾಕೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹತ್ಯೆಯ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗುವುದು ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದರು.

70 ವರ್ಷದ ರಾಠೀ ಅವರು ಬಹದ್ದೂರ್‌ಗಢದ ಮಾಜಿ ಶಾಸಕರೂ ಹೌದು. ಎರಡು ಬಾರಿಯ ಶಾಸಕರೂ ಆಗಿರುವ ರಾಠೀ ಅವರಿಗೆ ಪೊಲೀಸ್‌ ಭದ್ರತೆ ಒದಗಿಸಿರಲಿಲ್ಲ. ಅವರಿಗೆ ಜೀವ ಬೆದರಿಕೆಯಿದ್ದು, ಭದ್ರತೆ ಒದಗಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೆವು. ಆದರೂ ಭದ್ರತೆ ನೀಡಿಲ್ಲ ಎಂದು ಐಎನ್‌ಎಲ್‌ಡಿ ಹಿರಿಯ ನಾಯಕ ಅಭಯ್ ಸಿಂಗ್ ಚೌಟಾಲಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.