ADVERTISEMENT

ಛತ್ತೀಸಗಢ: ನಕ್ಸಲರಿಂದ ಸ್ಫೋಟ, ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ

ಪಿಟಿಐ
Published 20 ಅಕ್ಟೋಬರ್ 2024, 0:54 IST
Last Updated 20 ಅಕ್ಟೋಬರ್ 2024, 0:54 IST
   

ನಾರಾಯಣಪುರ: ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲೀಯರು ಕಚ್ಚಾ ಬಾಂಬ್ ಸ್ಫೋಟಿಸಿದ್ದು, ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಇತರ ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬೂಝಮಾಢ ಪ್ರದೇಶದ ಕೊಡ್ಲಿಯಾರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ ರಾಜ್ ಹೇಳಿದ್ದಾರೆ.

ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಐಟಿಬಿಪಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತು ರಾಜ್ಯ ಪೊಲೀಸ್ ಇಲಾಖೆಯ ಜಿಲ್ಲಾ ಮೀಸಲು ಪಡೆ ಮತ್ತಿತರ ಪಡೆಗಳ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ADVERTISEMENT

ಕಾರ್ಯಾಚರಣೆ ನಡೆಸಿ ಹಿಂದಿರುಗುವಾಗ ಸ್ಫೋಟ ಆಗಿದೆ. ನಾಲ್ಕು ಮಂದಿ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಐಟಿಬಿಪಿ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತ‍ಪಟ್ಟರು.

ಏಳು ಜಿಲ್ಲೆಗಳಿರುವ ಬಸ್ತಾರ್ ವಲಯದಲ್ಲಿ ಈ ವರ್ಷ ನಕ್ಸಲ್ ಸಂಬಂಧಿ ಘಟನೆಗಳಲ್ಲಿ 17 ಮಂದಿ ಪೊಲೀಸರು ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳ ಗುಂಡಿಗೆ 189 ಮಂದಿ ನಕ್ಸಲೀಯರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.