ನವದೆಹಲಿ:ಶಬರಿಮಲೆ ದೇಗುಲ ಪ್ರವೇಶಿಸಿದ ಕನಕದುರ್ಗಾ ಮತ್ತು ಬಿಂದು ಅವರಿಗೆ ದಿನದ 24 ಗಂಟೆಯೂ ರಕ್ಷಣೆ ಕೊಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ದೇವಾಲಯ ಪ್ರವೇಶಿದ ನಂತರ ಈ ಇಬ್ಬರು ಮಹಿಳೆಯರು ಸುಮಾರು ಎರಡು ವಾರಗಳ ಕಾಲ ವನವಾಸ ಅನುಭವಿಸಿದ್ದರು. ಜನವರಿ 15ರಂದು ಕನಕದುರ್ಗಾ ಮನೆಗೆ ವಾಪಾಸ್ ಆದಾಗ ಅವರ ಅತ್ತೆಯೇ ಹಲ್ಲೆ ನಡೆಸಿದ್ದರು. ಹಾಗಾಗಿ ಕನಕದುರ್ಗಾ ಮತ್ತು ಬಿಂದು ‘ತಮಗೆ ಭದ್ರತೆಯ ಅಗತ್ಯವಿದೆ’ ಎಂದುಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಇಬ್ಬರು ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಮಾತ್ರ ಪರಿಗಣಿಸಲಾಗುವುದು. ಹಾಗಾಗಿ, ರಕ್ಷಣೆ ಕೋರಿ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ಶಬರಿಮಲೆ ವಿಚಾರಕ್ಕೆ ಸಂಬಂಧಿಸಿ ಬಾಕಿ ಇರುವ ಅರ್ಜಿಗಳ ಜತೆಗೆ ಸೇರಿಸಲಾಗುವುದಿಲ್ಲ. ಅಷ್ಟೇ ಅಲ್ಲ, ಮಹಿಳೆಯರ ರಕ್ಷಣೆಯ ವಿಚಾರದಲ್ಲಿ ಬೇರೆ ಯಾವುದೇ ರೀತಿಯ ಅರ್ಜಿಗಳಿಗೆ ಅವಕಾಶ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.
‘ಈಗಾಗಲೇ ನಾವು ಭದ್ರತೆ ನೀಡುತ್ತಿದ್ದೇವೆ’ ಎಂದು ಕೇರಳ ಸರ್ಕಾರ ಕೋರ್ಟ್‌ಗೆ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಅದನ್ನು ಮುಂದುವರೆಸಿ’ ಎಂದಿದೆ.
ಇದನ್ನೂ ಓದಿ: ಕನಕದುರ್ಗ ಮೇಲೆ ಸಂಬಂಧಿಕರಿಂದ ಹಲ್ಲೆ
ಶಬರಿಮಲೆಗೆ ಹೋಗುವ ಎಲ್ಲ ಮಹಿಳೆಯರಿಗೆ ಸಾಕಷ್ಟು ಭದ್ರತೆ ಕೊಡಬೇಕು ಮತ್ತು ಮಹಿಳೆಯರು ಪ್ರವೇಶಿಸಿದ ಬಳಿಕ ದೇಗುಲವನ್ನು ಶುದ್ಧೀಕರಿಸಬಾರದು ಎಂಬುದು ಸೇರಿ ಇತರ ಹಲವು ಕೋರಿಕೆಗಳನ್ನೂ ಕನಕದುರ್ಗಾ ಮತ್ತು ಬಿಂದು ಅವರು ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದರು. ಬಾಕಿ ಇರುವ ಅರ್ಜಿಗಳ ಜತೆಗೆ ಈ ಇಬ್ಬರ ಅರ್ಜಿಯನ್ನೂ ಸೇರಿಸಿಕೊಳ್ಳಬೇಕು ಎಂದು ಅವರ ವಕೀಲರಾದ ಇಂದಿರಾ ಜೈಸಿಂಗ್ ವಾದಿಸಿದರು. ಆದರೆ, ಇಂತಹ ಯಾವುದೇ ವಿಚಾರಗಳನ್ನು ಈಗ ಪರಿಶೀಲಿಸಲಾಗುವುದಿಲ್ಲ. ಕೇರಳ ಸರ್ಕಾರವು ಈ ಮಹಿಳೆಯರಿಗೆ ಈಗಾಗಲೇ ಭದ್ರತೆ ಒದಗಿಸಿದ್ದರೆ, ನ್ಯಾಯಾಲಯದ ಆದೇಶದ ಬಳಿಕ ಅದನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಪೀಠ ಹೇಳಿದೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಬಿಂದು, ‘ಈ ಆದೇಶದಿಂದ ನ್ಯಾಯಾಲಯದ ಮೇಲಿದ್ದ ನಂಬಿಕೆ ಇನ್ನಷ್ಟು ಹೆಚ್ಚಾಯಿತು. ಸಮಾಜದಲ್ಲಿನ ಕೆಲವು ಸಮುದಾಯ ನಮ್ಮನ್ನು ಅಪರಾಧಿಗಳಂತೆ ನೋಡುತ್ತಿರುವಾಗ ಕೋರ್ಟ್ ನಮ್ಮ ಪರ ನಿಂತಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ನಾವು ಪಾಲಿಸಿದ್ದೇವೆ ಅಷ್ಟೇ. ಈಗಿನ ತೀರ್ಪು ಇನ್ನಷ್ಟು ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಧೈರ್ಯ ನೀಡಲಿದೆ’ ಎಂದು ಹೇಳಿದರು.
‘ದೇವಸ್ಥಾನ ಪ್ರವೇಶಿಸಿದ ನಂತರವಂತೂ ನಾವು ಹೊರಗೆಲ್ಲೂ ಹೋಗದಂತೆ, ಅಡಗಿಕೊಂಡಿರುವಂತೆ ಒತ್ತಾಯಿಸಲಾಗುತ್ತಿತ್ತು. ಸುಪ್ರೀಂಕೋರ್ಟ್ ಈ ತೀರ್ಪಿನಿಂದ ಇನ್ನು ಮುಂದೆ ಸಹಜ ಬದುಕು ನಡೆಸಬಹುದು’ ಎಂದು ವಿವರಿಸಿದರು.
ಮತ್ತಷ್ಟು ಓದು
ಸುಪ್ರೀಂಕೋರ್ಟ್‌ನಲ್ಲಿಶಬರಿಮಲೆ ಪ್ರಕರಣ: ನೀವು ಓದಲೇಬೇಕಾದ 11 ಸುದ್ದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.