ADVERTISEMENT

ಹರಿಯಾಣ: ಗಣಿ ಭೂಕುಸಿತದಲ್ಲಿ ನಾಲ್ವರ ಸಾವು

ಪಿಟಿಐ
Published 1 ಜನವರಿ 2022, 16:58 IST
Last Updated 1 ಜನವರಿ 2022, 16:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ:ಹರಿಯಾಣದ ಭಿವಾನಿ ಜಿಲ್ಲೆಯ ಡಾಡಮ್ ಗಣಿಗಾರಿಕೆ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದು, ಹಲವರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಪ್ರದೇಶದ ತೋಷಮ್ ಬ್ಲಾಕ್‌ನಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ ಸಂಭವಿಸಿದ ಭೂಕುಸಿತದಿಂದಾಗಿ ಆರಕ್ಕೂ ಹೆಚ್ಚು ಡಂಪರ್ ಟ್ರಕ್ ಹಾಗೂ ಕಾಮಗಾರಿ ಯಂತ್ರಗಳು ಅವಶೇಷಗಳಡಿಯಲ್ಲಿ ಹೂತು ಹೋಗಿವೆ’ ಎಂದು ಅವರು ಹೇಳಿದ್ದಾರೆ.

‘ಭೂಕುಸಿತದಲ್ಲಿ ಸಾವಿಗೀಡಾದವರನ್ನು ಬಿಹಾರ ಮೂಲದ ತೂಫಾನ್ ಶರ್ಮಾ (30) ಮತ್ತು ಹರಿಯಾಣದ ಜಿಂದ್ ಜಿಲ್ಲೆಯ ಬಗನ್‌ವಾಲಾ ಮೂಲದ ಬಿಂದರ್ (23)ಎಂದು ಗುರುತಿಸಲಾಗಿದೆ. ಉಳಿದವರ
ಗುರುತು ಇನ್ನೂ ಪತ್ತೆಯಾಗಿಲ್ಲ’ ಎಂದು ಭಿವಾನಿ ಮುಖ್ಯ ವೈದ್ಯಾಧಿಕಾರಿ ರಘುವೀರ್ ಶಾಂಡಿಲ್ಯ ಅವರು ತಿಳಿಸಿದ್ದಾರೆ.

ADVERTISEMENT

ರಕ್ಷಣಾ ತಂಡಗಳ ನಿಯೋಜನೆ: ಭೂಕುಸಿತದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ರಕ್ಷಣಾ ತಂಡಗಳನ್ನು ನಿಯೋ
ಜಿಸಲಾಗಿದೆ ಎಂದು ಹರಿಯಾಣದ ಗೃಹಸಚಿವ ಅನಿಲ್ ವಿಜ್ ಅವರು ತಿಳಿಸಿದ್ದಾರೆ.

ಘಟನೆಯ ಕುರಿತು ಟ್ವೀಟ್ ಮಾಡಿರುವ ಅನಿಲ್ ಅವರು, ‘ಹರಿಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ಸ್ಥಳದಲ್ಲಿ ನಡೆದ ಘಟನೆಯ ಬಗ್ಗೆ ನಾನು ತೀವ್ರ ದುಃಖಿತನಾಗಿದ್ದೇನೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗಾಜಿಯಾಬಾದ್‌ನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ, ಮಧುಬನ್‌ನಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಹಿಸಾರ್‌ನಿಂದ ಸೇನಾ ಘಟಕವನ್ನು ಕರೆಸಲಾಗಿದೆ. ಇಲ್ಲಿಯವರೆಗೆ ನಾಲ್ಕು ಮಂದಿಯ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಇನ್ನೂ ನಾಲ್ಕೈದು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಸಿವಾನಿ) ಮನೋಜ್ ಕುಮಾರ್ ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಅವಶೇಷಗಳಡಿ ನಾಲ್ಕೈದು ಮಂದಿಗಿಂತಲೂ ಹೆಚ್ಚಿನ ಮಂದಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.

‘ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿದ್ದಾರೆ.

‘ಅವಶೇಷಗಳಡಿ ಸಿಲುಕಿರುವವ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ವೈದ್ಯರ ತಂಡವು ಸ್ಥಳದಲ್ಲಿ ಬೀಡು ಬಿಟ್ಟಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಜೆ.ಪಿ. ದಲಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಆರೋಪ

‘ಮುಖ್ಯಮಂತ್ರಿ ಖಟ್ಟರ್ ಅವರ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ್ ಅವರು, ‘ಈ ಸಾವಿಗೆ ಯಾರು ಕಾರಣ? ಅಕ್ರಮ ಗಣಿಗಾರಿಕೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವಿರಾ’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.