ADVERTISEMENT

ಗುಜರಾತ್: angioplasty ಬಳಿಕ ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಾವು;ತನಿಖೆಗೆ ಆದೇಶ

ಪಿಟಿಐ
Published 12 ನವೆಂಬರ್ 2024, 12:59 IST
Last Updated 12 ನವೆಂಬರ್ 2024, 12:59 IST
   

ಅಹಮದಾಬಾದ್: ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದ ಇಬ್ಬರು ಫಲಾನುಭವಿಗಳು ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ಬಳಿಕ ಮೃತಪಟ್ಟಿದ್ದು, ಗುಜರಾತ್ ಸರ್ಕಾರ ತನಿಖೆಗೆ ಆದೇಶಿಸಿದೆ.

ಆಸ್ಪತ್ರೆಯು ಎಲ್ಲರನ್ನೂ ಕತ್ತಲಲ್ಲಿಟ್ಟು ಸರ್ಕಾರದ ಯೋಜನೆಯಡಿ ವೈದ್ಯಕೀಯ ಬಿಲ್‌ಗಳ ಹಣ ಪಡೆಯುವ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಅಗತ್ಯವಿರುವ ಜನರಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆಯನ್ನು ಒದಗಿಸುತ್ತದೆ.

ADVERTISEMENT

ನಗರದ ಬೋಡಕ್‌ದೇವ್ ಪ್ರದೇಶದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಸೋಮವಾರ ನಡೆದ ಆ್ಯಂಜಿಯೊಪ್ಲಾಸ್ಟಿ ಮತ್ತು ಸ್ಟೆಂಟ್ ಅಳವಡಿಕೆಯ ಶಸ್ತ್ರಚಿಕಿತ್ಸೆ ನಂತರ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮೃತರನ್ನು - ನಾಗರ್‌ಭಾಯ್ ಸೆನ್ಮಾ (59) ಮತ್ತು ಮಹೇಶ್ ಬರೋಟ್ (45) ಎಂದು ಗುರುತಿಸಲಾಗಿದೆ.

ಸಾವಿನ ಬಗ್ಗೆ ತಿಳಿದ ನಂತರ, ಅವರ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಸರ್ಕಾರದಿಂದ ನ್ಯಾಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆರೋಗ್ಯವಾಗಿದ್ದವರನ್ನು ಕರೆತಂದು ಹೀಗೆ ಮಾಡಿದ್ದಾರೆ ಎಂದು ದೂರಿದ್ದಾರೆ.

‘ಖ್ಯಾಟಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಅತ್ಯಂತ ಗಂಭೀರವಾದದ್ದಾಗಿದೆ. ರಾಜ್ಯದ ವಂಚನೆ ನಿಗ್ರಹ ದಳದಿಂದ ತುರ್ತು ತನಿಖೆಗೆ ಆದೇಶಿಸಿದ್ದಾನೆ. ಆಸ್ಪತ್ರೆಯಿಂದ ಯಾವುದೇ ವಂಚನೆ, ನಿರ್ಲಕ್ಷ್ಯ ನಡೆದಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಬೊರಿಸಾನಾದಲ್ಲಿ ಆಸ್ಪತ್ರೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಪರೀಕ್ಷೆ ಬಳಿಕ 17 ಮಂದಿ ಗ್ರಾಮಸ್ಥರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿತ್ತು. ಆ ಪೈಕಿ 7 ಮಂದಿಗೆ ಆ್ಯಂಜಿಯೊಪ್ಲಾಸ್ಟಿ ನಡೆಸಿದೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.