ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಆದಿಗಂ ಪ್ರದೇಶದಲ್ಲಿ ಶನಿವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರೆ, ನಾಲ್ವರು ಯೋಧರು ಮತ್ತು ಒಬ್ಬರು ಹಿರಿಯ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಆದಿಗಂ ಗ್ರಾಮದ ಬಳಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಜಂಟಿ ಪಡೆ ಬರುವುದು ತಿಳಿದ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಪ್ರತಿದಾಳಿ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅವರಿಂದ ಎರಡು ಎ.ಕೆ ರೈಫಲ್‌ಗಳು ಸೇರಿದಂತೆ ಕೆಲ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಉತ್ತರ ವಿಭಾಗದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಂ.ವಿ.ಸುಚಿಂದ್ರ ಕುಮಾರ್ ತಿಳಿಸಿದ್ದಾರೆ.
ಗಾಯಗೊಂಡವರನ್ನು ಕುಲ್ಗಾಮ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುಮ್ತಾಜ್ ಅಲಿ ಭಟ್ಟಿ ಮತ್ತು ಯೋಧರಾದ ಮೋಹನ್ ಶರ್ಮಾ, ಸೋಹನ್ ಕುಮಾರ್, ಯೋಗಿಂದರ್, ಮೊಹಮ್ಮದ್ ಇಸ್ರಾನ್ ಎಂದು ಗುರುತಿಸಲಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ದಶಕದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎರಡು ಹಂತದ ಮತದಾನ ಮುಗಿದಿದೆ. ಕೊನೆಯ ಹಂತದ ಮತದಾನ ಅಕ್ಟೋಬರ್ 1ರಂದು ನಿಗದಿಯಾಗಿದ್ದು, ಮತ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ. ಕೆಲ ತಿಂಗಳಿಂದ ಕಣಿವೆ ಪ್ರದೇಶದಲ್ಲಿ ಉಗ್ರರ ದಾಳಿ ಹೆಚ್ಚಾಗಿದ್ದು, ಸೇನೆ, ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನೂ ತೀವ್ರಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.