ADVERTISEMENT

ಜಮ್ಮು ಎನ್‌ಕೌಂಟರ್‌: ಇಬ್ಬರು ಜೆಇಎಂ ಉಗ್ರರ ಹತ್ಯೆ; ಎಎಸ್‌ಐ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 8:54 IST
Last Updated 22 ಏಪ್ರಿಲ್ 2022, 8:54 IST
ಸುಂಜ್ವಾನ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ
ಸುಂಜ್ವಾನ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ   

ಜಮ್ಮು: ಇಲ್ಲಿನ ಹೊರವಲಯದ ಸುಂಜ್ವಾನ್‌ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಭದ್ರತಾಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಜೈಶೆ–ಮೊಹಮ್ಮದ್‌ (ಜೆಇಎಂ) ಉಗ್ರರು ಹತರಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಎಎಸ್‌ಐ ಹುತಾತ್ಮರಾಗಿದ್ದಾರೆ. ಒಂಬತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಎಸ್‌.ಪಿ.ಪಾಟೀಲ ಹುತಾತ್ಮರಾದವರು. ‘ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಐಎಸ್‌ಎಫ್‌ ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ ಎಎಸ್‌ಐ ಎಸ್‌.ಪಿ.ಪಾಟೀಲ ಬಲಿಯಾದರು. ಇತರೆ ಒಂಬತ್ತು ಮಂದಿ ಗಾಯಗೊಂಡರು. ನಂತರ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಉಗ್ರರು ಹತರಾದರು’ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್‌ ಸಿಂಗ್‌ ತಿಳಿಸಿದರು.

ಜಮ್ಮುವಿನಿಂದ 17 ಕಿ.ಮೀ ದೂರವಿರುವ ಸಾಂಬಾ ಜಿಲ್ಲೆಯ ಪಾಲಿ ಗ್ರಾಮದಲ್ಲಿ ಏಪ್ರಿಲ್‌ 24ರಂದು ನಡೆಯಲಿರುವ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಕಣಿವೆ ಪ್ರದೇಶಕ್ಕೆ ಪ್ರಧಾನಿ ಭೇಟಿ ನೀಡುವ ಎರಡು ದಿನಗಳ ಮುನ್ನ ಉಗ್ರರು ವಿದ್ವಂಸಕ ಕೃತ್ಯ ನಡೆಸಲು ರೂಪಿಸಿದ್ದ ಯೋಜನೆಯನ್ನು ಭದ್ರತಾಪಡೆಗಳು ವಿಫಲಗೊಳಿಸಿವೆ.

ADVERTISEMENT

‘ವಿದೇಶಿ ಮೂಲದ ಈ ಇಬ್ಬರು ಜೈಶೆ–ಮೊಹಮ್ಮದ್‌ ಸಂಘಟನೆಗೆ ಸೇರಿದವರಾಗಿದ್ದು, ಆತ್ಮಾಹುತಿ ದಾಳಿ ಮೂಲಕ ಭದ್ರತಾ ಪಡೆ ಶಿಬಿರದ ಮೇಲೆ ದಾಳಿ ಅಥವಾ ಭದ್ರತಾ ಪಡೆಗಳ ಮೇಲೆ ಅತಿಹೆಚ್ಚು ಹಾನಿಯನ್ನು ಉಂಟುಮಾಡುವುದು ಅವರ ಉದ್ದೇಶವಾಗಿತ್ತು. ಅಲ್ಲದೇ ಏಪ್ರಿಲ್‌ 24ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯನ್ನು ಹಾಳು ಮಾಡುವ ಸಾಧ್ಯತೆಯಿತ್ತು.ಸಕಾಲಿಕದಲ್ಲಿ ಎಚ್ಚೆತ್ತ ಭದ್ರದತಾ ಪಡೆಗಳು ಉಗ್ರರ ಯೋಜನೆಯನ್ನು ವಿಫಲಗೊಳಿಸಿವೆ’ ಎಂದು ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದರು.

‘ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿದ್ದ ಈ ಇಬ್ಬರು ಉಗ್ರರು, ದೊಡ್ಡಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದರು. ಉಗ್ರರಿಂದ ಎಕೆ–47 ರೈಫಲ್ಸ್‌, ಗ್ರೆನೆಡ್‌, ಮ್ಯಾಗಜೀನ್ಸ್‌, ಸ್ಯಾಟಲೈಟ್‌ ಫೋನ್‌ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಡಿಜಿಪಿ ಮುಖೇಶ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.