ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯದ ‘ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ’ಯಲ್ಲಿ (ಆರ್‌ಸಿಎ) ತರಬೇತಿ ಪಡೆದ 20 ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವಿಶ್ವವಿದ್ಯಾನಿಲಯವು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಆಯ್ಕೆಯಾದ ವಿದ್ಯಾರ್ಥಿಗಳು ಜನವರಿಯಲ್ಲಿ ಯುಪಿಎಸ್‌ಸಿ ನಡೆಸಿದ ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. ನಂತರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ವ್ಯಕ್ತಿತ್ವ ಪರೀಕ್ಷೆಗಳನ್ನು ಎದುರಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಜಾಮಿಯ ಮಿಲಿಯಾ ವಿವಿಯ ಉಪ ಕುಲಪತಿ ನಜ್ಮಾ ಅಖ್ತರ್ ಅಭಿನಂದಿಸಿದ್ದಾರೆ. ಅಲ್ಲದೆ, ಅಭ್ಯರ್ಥಿಗಳ ಈ ಸಾಧನೆಗೆ ಕಾರಣರಾದ ಜೆಎಂಐನ ಬೋಧಕವರ್ಗವನ್ನು ಶ್ಲಾಘಿಸಿದ್ದಾರೆ.
ಜೆಎಂಐನಲ್ಲಿ ಕೋಚಿಂಗ್ ಮತ್ತು ವೃತ್ತಿ ಯೋಜನಾ ಕೇಂದ್ರವು ನಡೆಸುತ್ತಿರುವ ಜಾಮಿಯಾ ಮಿಲಿಯಾ ವಿವಿಗೆ ಯುಜಿಸಿ ಧನಸಹಾಯ ನೀಡುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ವಸತಿ ಸೌಲಭ್ಯಗಳನ್ನು ಈ ತರಬೇತಿ ಕೇಂದ್ರ ಒದಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.