ಬಿಲಾಸ್‌ಪುರ: ಛತ್ತೀಸಗಢದ ಬಿಲಾಸ್‌ಪುರ ರೈಲ್ವೆ ವಿಭಾಗದಲ್ಲಿ ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ ಕನಿಷ್ಠ 20 ಬೋಗಿಗಳು ಹಳಿ ತಪ್ಪಿವೆ. ಇದರಿಂದ ಪ್ರಯಾಣಿಕ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಬಿಲಾಸ್‌ಪುರ-ಕಾಟ್ನಿ ವಿಭಾಗದಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪುರಿ-ಯೋಗ್‌ನಗರಿ ರಿಷಿಕೇಶ ಉತ್ಕಲ ಎಕ್ಸ್‌ಪ್ರೆಸ್ ಮತ್ತು ದುರ್ಗ್-ಎಂಸಿಟಿಎಂ (ಉಧಂಪುರ) ಎಕ್ಸ್‌ಪ್ರೆಸ್ ಸೇರಿದಂತೆ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಕಲ್ಲಿದ್ದಲು ತುಂಬಿದ ಸರಕು ಸಾಗಣೆ ರೈಲು ಬಿಲಾಸ್‌ಪುರದಿಂದ ಕಾಟ್ನಿ ಕಡೆ ತೆರಳುತ್ತಿದ್ದಾಗ 20 ಬೋಗಿಗಳು ಖೋಂಗ್‌ಸರಾ ಮತ್ತು ಭನವರ್‌ಟಂಕ್ ರೈಲು ನಿಲ್ದಾಣಗಳ ನಡುವೆ ಇಂದು ಬೆಳಿಗ್ಗೆ 11.11ರ ಸುಮಾರಿಗೆ ಹಳಿ ತಪ್ಪಿವೆ ಎಂದು ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಬಿಲಾಸ್‌ಪುರದಿಂದ ಅಧಿಕಾರಿಗಳ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಹಳಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.