ADVERTISEMENT

ಜಾನುವಾರು ಕಳವು ಶಂಕೆ: ಬರೇಲಿಯಲ್ಲಿ ಯುವಕನ ಮೇಲೆ ಗುಂಪು ಹಲ್ಲೆ, ಹತ್ಯೆ

ಉತ್ತರ ಪ್ರದೇಶದಲ್ಲಿ ಘಟನೆ

ಪಿಟಿಐ
Published 30 ಆಗಸ್ಟ್ 2018, 9:26 IST
Last Updated 30 ಆಗಸ್ಟ್ 2018, 9:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರೇಲಿ: ಎಮ್ಮೆ ಕಳವು ಮಾಡಿದ್ದಾನೆಂದು ಅನುಮಾನಿಸಿ ಉತ್ತರ ಪ್ರದೇಶದ ಭೋಲಾಪುರ್ ಹದೊಲಿಯಾ ಗ್ರಾಮದಲ್ಲಿ ಶಾರುಖ್ (20) ಎಂಬ ಯುವಕನನ್ನು ಗುಂಪೊಂದು ಹೊಡೆದು ಸಾಯಿಸಿದೆ.

ಬುಧವಾರ ರಾತ್ರಿ ಘಟನೆ ನಡೆದಿದೆ. ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಬರೇಲಿಯ ಕೇಂಟ್ ಪೊಲೀಸ್ ಠಾಣೆಯ ಎಸ್‌ಪಿ ಅಭಿನಂದನ್ ಸಿಂಗ್ ತಿಳಿಸಿದ್ದಾರೆ.

ನಡೆದಿದ್ದೇನು?: ಶಾರುಖ್ ಮತ್ತು ಮೂವರನ್ನು ತಡೆದು ನಿಲ್ಲಿಸಿದ ಸ್ಥಳೀಯರ ಗುಂಪು ಅವರು ಎಮ್ಮೆ ಕಳವು ಮಾಡಿದ್ದಾರೆಂದು ಅನುಮಾನಿಸಿದ್ದಾರೆ. ಅಲ್ಲದೆ, ಹೊಡೆಯಲಾರಂಭಿಸಿದ್ದಾರೆ. ಈ ವೇಳೆ ಇತರ ಮೂವರು ತಪ್ಪಿಸಿಕೊಂಡಿದ್ದು, ಶಾರುಖ್‌ಗೆ ತೀವ್ರ ಏಟಾಗಿದೆ. ಗಂಭೀರ ಗಾಯಗೊಂಡಿದ್ದ ಶಾರುಖ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದುಬೈಯಲ್ಲಿ ದರ್ಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾರುಖ್ ಇತ್ತೀಚೆಗೆ ತವರಿಗೆ ವಾಪಸಾಗಿದ್ದರು ಎಂದು ಎಸ್‌ಪಿ ಹೇಳಿದ್ದಾರೆ.

ತೀವ್ರವಾಗಿ ಹೊಡೆತ ಬಿದ್ದಿರುವುದೇ ಮೃತಪಡಲು ಕಾರಣ ಎಂದು ಮರೋಣತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ. 20-25 ಜನ ಶಾರುಖ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಅವರ ಸಹೋದರ ದೂರು ನೀಡಿದ್ದಾರೆ. ಎಮ್ಮೆ ಕಳವಾಗಿದೆ ಎಂದು ಆರೋಪಿಸಿದವರೂ ದೂರು ನೀಡಿದ್ದಾರೆ. ಎರಡೂ ಕಡೆಯವರಿಂದ ಎಫ್‌ಐಆರ್‌ ದಾಖಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.