ADVERTISEMENT

ಹೃದಯ ಕಸಿ ಮಾಡಿ 20 ವರ್ಷದ ಯುವಕನಿಗೆ ಹೊಸ ಜೀವನ ಕೊಟ್ಟ ಏಮ್ಸ್ ವೈದ್ಯರು

ಪಿಟಿಐ
Published 25 ಡಿಸೆಂಬರ್ 2020, 12:49 IST
Last Updated 25 ಡಿಸೆಂಬರ್ 2020, 12:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಪರೂಪದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ದೆಹಲಿಯ 20 ವರ್ಷದ ಯುವಕನಿಗೆ ವಡೋದರದ ಮೆದುಳು ಸತ್ತಿದ್ದ 17 ವರ್ಷದ ಯುವತಿಯ ಹೃದಯವನ್ನು ಕಸಿ ಮಾಡುವ ಮೂಲಕ ಏಮ್ಸ್ ವೈದ್ಯರು ಹೊಸ ಜೀವನ ನೀಡಿದ್ದಾರೆ.

ಈ ವರ್ಷ ಏಮ್ಸ್‌ನಲ್ಲಿ ನಡೆದ 3ನೇ ಹೃದಯ ಕಸಿ ಶಸ್ತ್ರಚಿಕಿತ್ಸೆ ಇದಾಗಿದ್ದು, ಇನ್ನೆರಡು ಫೆಬ್ರುವರಿ ಮಧ್ಯಭಾಗದಲ್ಲಿ ಮತ್ತು ಮಾರ್ಚ್ ಆರಂಭದಲ್ಲಿ ಕೋವಿಡ್ 19 ಲಾಕ್‌ ಡೌನಿಗೂ ಮುನ್ನ ಜರುಗಿದ್ದವು.

ಪಶ್ಚಿಮ ದೆಹಲಿಯ ನಿವಾಸಿ 20 ವರ್ಷದ ಯುವಕ ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದನು, ಈ ಸಮಸ್ಯೆಯನ್ನು 'ಎಬ್‌ಸ್ಟೈನ್ ಅನಾಮಲಿ' ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ, ಆತನ ಹೃದಯ ತುಂಬಾ ದುರ್ಬಲಗೊಂಡಿತ್ತು. ಹೃದಯದ ಬಲಭಾಗ ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ADVERTISEMENT

ಕಳೆದ 4 ವರ್ಷಗಳಿಂದ ಈ ಯುವಕ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ. ಾದರೆ, ಹೃದಯ ಕಸಿ ಮಾಡಲು ದಾನಿಗಳೇ ಸಿಕ್ಕಿರಲಿಲ್ಲ.

"ಕಳೆದ ಆರು ತಿಂಗಳಲ್ಲಿ, ಅವನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದನು, ಆತನಿಗೆ ತುರ್ತಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅಗತ್ಯವಿತ್ತು. ಈ ಸಂದರ್ಭ, ಗುಜರಾತ್‌ನಿಂದ ದಾನಿಯ ಹೃದಯದ ಲಭ್ಯತೆ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಿಂದ ನಮಗೆ ಮಾಹಿತಿ ಬಂದಿತ್ತು" ಎಂದು ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕುಲರ್ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಮಿಲಿಂದ್ ಹೊಟೆ ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ ವಡೋದರಾಕ್ಕೆ ತೆರಳಿದ್ದ ಏಮ್ಸ್ ತಂಡವು ಹೃದಯವನ್ನು ತೆಗೆದುಕೊಂಡು ಮಧ್ಯಾಹ್ನದ ಹೊತ್ತಿಗೆ ದೆಹಲಿಗೆ ಬಂದಿತ್ತು. ಬಳಿಕ, ಸುಮಾರು ಏಳು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯುವಕನಿಗೆ ಹೃದಯ ಕಸಿ ಮಾಡಲಾಗಿದೆ.

ವೈದ್ಯರ ಈ ಕೆಲಸಕ್ಕೆ ದೆಹಲಿ ಪೊಲೀಸರು ಸಹ ಕೈಜೋಡಿಸಿದ್ದರು. ವಿಮಾನ ನಿಲ್ದಾಣದ ಟರ್ಮಿನಲ್‌ 2ರಿಂದ ಏಮ್ಸ್‌ವರೆಗೆ 18 ಕಿ.ಮೀ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದ ಪೊಲೀಸರು, ಕೇವಲ 12 ನಿಮಿಷಗಳಲ್ಲಿ ಹೃದಯವೂ ಆಸ್ಪತ್ರೆಗೆ ಸೇರುವಂತೆ ನೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.