ಗ್ವಾಲಿಯರ್ (ಪಿಟಿಐ): 1999ರಲ್ಲಿ ಭಾರತದ ಸೇನೆಯು ಕಾರ್ಗಿಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ಇದೇ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವಕ್ಕೆ 20 ವರ್ಷ ತುಂಬಲಿದೆ. ಕಾರ್ಗಿಲ್ ಯುದ್ಧದ ಅಂದಿನ ಚಿತ್ರಣವನ್ನು ಯಥಾವತ್ತಾಗಿ ಮರುಸೃಷ್ಟಿಸಿ ತೋರಿಸುವ ಯತ್ನಕ್ಕೆ ಭಾರತೀಯ ವಾಯುಪಡೆ ಮುಂದಾಗಿದೆ. ಇದಕ್ಕಾಗಿ ಗ್ವಾಲಿಯರ್‌ನ ಐಎಎಫ್ ವಾಯುನೆಲೆಯನ್ನು ಯುದ್ಧಭೂಮಿ ಯಾಗಿ ಮರುಸೃಷ್ಟಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ದ್ರಾಸ್–ಕಾರ್ಗಿಲ್ ಪ್ರದೇಶದ ಟೈಗರ್ ಹಿಲ್ ಅನ್ನು ಇಲ್ಲಿ ರೂಪಿಸಲಾಗಿದೆ. ‘ಮಿರಾಜ್ 2000’ ವಿಮಾನಗಳನ್ನು ಬಳಸಿ ಈ ‘ಮಾದರಿ ಬೆಟ್ಟ’ದ ಮೇಲೆ ಬಾಂಬ್ ಸಿಡಿಸಿ ಯುದ್ಧದ ಚಿತ್ರಣ ಕಟ್ಟಿಕೊಡಲಾಗುತ್ತದೆ. ಜುಲೈ 25ರಿಂದ ಮೂರು ದಿನ ನಡೆಯುವ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಬಿ.ಎಸ್. ಧನೋಆ ಭಾಗವಹಿಸಲಿದ್ದಾರೆ.
‘ಮಿರಾಜ್’ಗಿಲ್ಲ ಸರಿಸಾಟಿ!: ದ್ರಾಸ್–ಕಾರ್ಗಿಲ್ ವಲಯದ ಟೈಗರ್ ಹಿಲ್ಸ್‌ನಲ್ಲಿ ಬೀಡುಬಿಟ್ಟಿದ್ದ ವಿರೋಧಿ ಪಡೆಯನ್ನು ಅಲ್ಲಿಂದ ತೆರವುಗೊಳಿಸಲು ಭಾರತೀಯ ಸೇನೆ ತೋರಿದ ಪರಾಕ್ರಮ ಅಪಾರ. ಯುದ್ಧಭೂಮಿಯಲ್ಲಿ ವಾಯುಪಡೆಯ ಬಲವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸು ಕಂಡಿದ್ದಕ್ಕೆ ಕಾರ್ಗಿಲ್ ಯುದ್ಧ ಒಂದು ಸ್ಪಷ್ಟ ನಿದರ್ಶನ ಎನ್ನುತ್ತಾರೆ ವಾಯುಪಡೆ ಅಧಿಕಾರಿಯೊಬ್ಬರು. ‘ಮಿರಾಜ್ 2000’ ಸರಣಿಯ ಯುದ್ಧ ವಿಮಾನಗಳು ಈ ಯುದ್ಧದಲ್ಲಿ ನಿರ್ಣಾ ಯಕ ಪಾತ್ರ ವಹಿಸಿದ್ದವು. ಟೈಗರ್ ಹಿಲ್‌ನಲ್ಲಿದ್ದ ಶತ್ರುಪಡೆಯ ಬಂಕರ್‌ಗಳ ಮೇಲೆ ಕರಾರುವಕ್ಕಾಗಿ ದಾಳಿ ನಡೆಸಿ, ನಾಶಪಡಿಸಿದ್ದವು. ಇದೇ ವಿಮಾನಗಳು ಬಾಲಾಕೋಟ್ ವಾಯುದಾಳಿಯಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದವು.
‘ಕಾರ್ಗಿಲ್ ವಿಜಯಜ್ಯೋತಿ’ ಸಂಚಾರ: ದೆಹಲಿಯಲ್ಲಿ ಜುಲೈ 14ರಂದೇ ವಿಜಯೋತ್ಸವಕ್ಕೆ ಚಾಲನೆ ಸಿಗಲಿದೆ. ಇಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಬೆಳಗಲಿದೆ. ಇದು 11 ನಗರಗಳಲ್ಲಿ ಸಂಚರಿಸಿ ಕೊನೆಯದಾಗಿ ದ್ರಾಸ್ ತಲುಪಲಿದೆ. ದ್ರಾಸ್‌ನ ಕಾರ್ಗಿಲ್ ಯುದ್ಧ ಸ್ಮಾರಕದ ಜ್ಯೋತಿ ಜೊತೆ ವಿಲೀನವಾಗಲಿದೆ.
ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆ ಭಾರತೀಯ ಸೇನಾಪಡೆ ದೇಶದ ಹಲವು ಭಾಗಗಳಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ.
ರಾಜಧಾನಿ ದೆಹಲಿ, ಗ್ವಾಲಿಯರ್, ಜಮ್ಮು ಕಾಶ್ಮೀರದ ದ್ರಾಸ್ ಪಟ್ಟಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿವೆ. ಮಿರಾಜ್ ಯುದ್ಧವಿಮಾನದ ಮೂರು ಸ್ಕ್ವಾಡ್ರನ್ ಗಳು ಗ್ವಾಲಿಯರ್ ವಾಯುನೆಲೆಯಲ್ಲಿ ಬೀಡುಬಿಟ್ಟಿವೆ. ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬಿತ್ತುವುದು ಹಾಗೂ ಹುತಾತ್ಮ ಸೈನಿಕರ ಬಲಿದಾನ ಸ್ಮರಣೆ ಮಾಡುವುದು ಈ ಕಾರ್ಯಕ್ರಮಗಳ ಉದ್ದೇಶ ಎನ್ನುತ್ತಾರೆ ವಾಯುಪಡೆಯ ಅಧಿಕಾರಿಯೊಬ್ಬರು.
ಮಿರಾಜ್ ಯುದ್ಧ ವಿಮಾನವನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರ ಅವಧಿ ಇನ್ನೂ 20 ವರ್ಷ ವಿಸ್ತರಣೆಯಾಗಲಿದೆ
- ರಾಜೇಶ್ ಕುಮಾರ್, ಏರ್ ಮಾರ್ಷಲ್
***
ಪ್ರದರ್ಶನದಲ್ಲಿ ಏನೇನು?
* ಐದು ‘ಮಿರಾಜ್ 2000’, ಎರಡು ‘ಮಿಗ್–21’, ಹಾಗೂ ಒಂದು ಸುಖೋಯ್ 30 ಎಂಕೆಐ ಯುದ್ಧವಿಮಾನಗಳಿಂದ ಪ್ರದರ್ಶನ
* ಫೆಬ್ರುವರಿಯಲ್ಲಿ ಬಾಲಾಕೋಟ್ ವಾಯುದಾಳಿಯಲ್ಲಿ ಬಳಸಿದ್ದ ಸ್ಪೈಸ್ ಬಾಂಬ್ ಕ್ಯಾರಿಯರ್ ಪ್ರದರ್ಶನ
* ‘ಆಪರೇಷನ್ ವಿಜಯ್’ನಲ್ಲಿ ಭಾಗಿಯಾಗಿದ್ದ ಹಾಲಿ ಹಾಗೂ ನಿವೃತ್ತ ಸೇನಾ ಸಿಬ್ಬಂದಿ ಉಪಸ್ಥಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.