ಇಂದೋರ್: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ದೇಹದಿಂದ ಹೊರತೆಗೆದ ಕಿಡ್ನಿಯನ್ನು ವೈದ್ಯರು, ಪೊಲೀಸರ ಬೆಂಬಲದೊಂದಿಗೆ ಭೋಪಾಲ್‌ನಿಂದ ಇಂದೋರ್‌ಗೆ ಸುಮಾರು 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕೊಂಡೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಡ್ನಿಯನ್ನು ಸಾಗಿಸಲು ಆಂಬ್ಯುಲೆನ್ಸ್ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರ ನಿಯಂತ್ರಿಸುವ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 12ರಂದು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಹರಿಶಂಕರ್ ಧಿಮೋಳೆ (56) ಅವರಿಗೆ ಮೆದುಳಿನ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಭೋಪಾಲ್‌ನ ಬನ್ಸಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹರಿಶಂಕರ್‌ಗೆ ಮೆದುಳು ನಿಷ್ಕ್ರಿಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಹರಿಶಂಕರ್ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು ಎಂದು ಡಾ.ರಾಕೇಶ್ ಭಾರ್ಗವ ‘ಪಿಟಿಐ’ಗೆ ತಿಳಿಸಿದ್ದಾರೆ.
ಒಂದು ಕಿಡ್ನಿಯನ್ನು ಬನ್ಸಾಲ್ ಆಸ್ಪತ್ರೆಯಲ್ಲಿ ನಿರ್ಗತಿಕ ರೋಗಿಗೆ ಕಸಿ ಮಾಡಲಾಗಿದ್ದು, ಇನ್ನೊಂದು ಕಿಡ್ನಿಯನ್ನು ಇಂದೋರ್‌ನ ಚೋತ್ರಂ ಆಸ್ಪತ್ರೆಯ ರೋಗಿಯೊಬ್ಬರಿಗೆ ಕಸಿ ಮಾಡಲಾಗಿದೆ ಎಂದು ಭಾರ್ಗವ ಮಾಹಿತಿ ನೀಡಿದ್ದಾರೆ.
‘ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿಯನ್ನು ಎರಡು ಗಂಟೆ 45 ನಿಮಿಷದಲ್ಲಿ ಭೋಪಾಲ್‌ನಿಂದ ಇಂದೋರ್‌ಗೆ ಸಾಗಿಸಲಾಯಿತು. ಗ್ರೀನ್ ಕಾರಿಡಾರ್ ಹೊರತುಪಡಿಸಿದ ಈ ಮಾರ್ಗದಲ್ಲಿ ಸಂಚರಿಸಲು 4 ಗಂಟೆ ಸಮಯ ಬೇಕಾಗುತ್ತದೆ’ ಎಂದು ಡಾ.ಅಮಿತ್ ಭಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.