ನವದೆಹಲಿ: 2016ರಲ್ಲಿ ₹2000 ನೋಟುಗಳನ್ನು ಚಲಾವಣೆಗೆ ತಂದಿರುವ ಕ್ರಮವನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ’ಮೂರ್ಖತನ’ ಎಂದು ಕರೆದಿದ್ದಾರೆ. ₹2000 ಮುಖಬೆಲೆಯು ಕಪ್ಪುಹಣ ಹೊಂದಿರುವವರಿಗೆ ಮಾತ್ರ ಸುಲಭವಾಗಿ ಹಣ ಕೂಡಿಡಲು ಸಹಾಯ ಮಾಡಿದೆ. ಅಲ್ಲದೆ, ಈಗ ಅವರಿಗೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ‘ರತ್ನಗಂಬಳಿ ಹಾಸಿ ಸ್ವಾಗತ’ ಮಾಡಿದಂತಾಗಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ₹2,000 ನೋಟುಗಳನ್ನು ಹಿಂತೆಗೆದುಕೊಳ್ಳುವ ಅನಿರೀಕ್ಷಿತ ಘೋಷಣೆ ಮಾಡಿದೆ. ಆದರೆ, ಸಾರ್ವಜನಿಕರಿಗೆ ₹2000 ನೋಟುಗಳನ್ನು ಖಾತೆಗಳಿಗೆ ಜಮಾ ಮಾಡಲು ಮತ್ತು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಸಮಯಾವಕಾಶ ನೀಡಿದೆ. ₹2000 ನೋಟುಗಳನ್ನು ವಿತರಿಸುವುದನ್ನು ನಿಲ್ಲಿಸುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶಿಸಿತ್ತು. ಇದನ್ನು ವಿರೋಧಿಸಿ ಮಾಜಿ ವಿತ್ತ ಸಚಿವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘₹2000 ನೋಟುಗಳನ್ನು ಬದಲಾಯಿಸಲು ಯಾವುದೇ ಗುರುತಿನ ಚೀಟಿ, ಪುರಾವೆಗಳ ಅಗತ್ಯವಿಲ್ಲ ಎಂದು ಬ್ಯಾಂಕ್‌ಗಳು ಸ್ಪಷ್ಟಪಡಿಸಿವೆ. ಕಪ್ಪುಹಣವನ್ನು ಬಹಿರಂಗಪಡಿಸಲು ₹2000 ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಬಿಜೆಪಿಯ ವಾದ ನೆಲಸಮವಾಗಿದೆ’ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಚಿದಂಬರಂ ಟೀಕಿಸಿದ್ದಾರೆ.
ಸಾಮಾನ್ಯ ಜನರ ಬಳಿ ₹2000 ನೋಟುಗಳಿಲ್ಲ, ಏಕೆಂದರೆ, ದೈನಂದಿನ ಚಿಲ್ಲರೆ ವಿನಿಮಯಕ್ಕೆ ಅದು ನಿಪ್ಪ್ರಯೋಜಕ. 2016ರಲ್ಲಿ ಚಲಾವಣೆಗೆ ಬಂದಾಗಿನಿಂದ ಅವುಗಳನ್ನು ದೂರವಿಟ್ಟಿದ್ದಾರೆ ಎಂದು ಚಿದಂಬರಂ ಹೇಳಿದರು.
‘ಹಾಗಾದರೆ, ₹2000 ನೋಟುಗಳನ್ನು ಇಟ್ಟುಕೊಂಡು ಅವುಗಳನ್ನು ಯಾರು ಬಳಸಿದ್ದಾರೆ? ನಿಮಗೆ ಉತ್ತರ ತಿಳಿದಿದೆ. ₹2,000 ನೋಟು ಕಪ್ಪು ಹಣ ಉಳ್ಳವರಿಗೆ ತಮ್ಮ ಹಣವನ್ನು ಸುಲಭವಾಗಿ ಸಂಗ್ರಹಿಸಲು ಸಹಾಯ ಮಾಡಿದೆ’ ಎಂದು ಚಿದಂಬರಂ ಹೇಳಿದ್ದಾರೆ.
‘₹2,000 ನೋಟು ಹೊಂದಿರುವವರಿಗೆ ತಮ್ಮ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಕೆಂಪು ಹಾಸಿನ ಮೇಲೆ ಸ್ವಾಗತಿಸಲಾಗುತ್ತಿದೆ. 2016ರಲ್ಲಿ ₹2000 ನೋಟು ಚಲಾವಣೆಗೆ ತಂದದ್ದು ಮೂರ್ಖತನದ ಕ್ರಮವಾಗಿತ್ತು, ಕನಿಷ್ಠ ಏಳು ವರ್ಷಗಳ ನಂತರವಾದರೂ ಈ ಮೂರ್ಖ ಕ್ರಮವನ್ನು ಹಿಂತೆಗೆದುಕೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ’ ಎಂದು ಚಿದಂಬರಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.