ADVERTISEMENT

2004ರ ಇಶ್ರತ್‌ ಜಹಾನ್‌ ಎನ್‌ಕೌಂಟರ್: ಪ್ರಕರಣ ಮುಕ್ತಾಯಗೊಳಿಸಿದ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 15:10 IST
Last Updated 19 ಏಪ್ರಿಲ್ 2021, 15:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್: ಗುಪ್ತದಳ (ಐಬಿ) ವಿಭಾಗದ ಇಬ್ಬರು ಅಧಿಕಾರಿಗಳ ವಿರುದ್ಧದ ಪ್ರಕರಣ ಕೈಬಿಡುವುದರೊಂದಿಗೆ ವಿಚಾರಣೆ ಇಲ್ಲದೆಯೇ 2004ರಲ್ಲಿ ನಡೆದಿದ್ದ ಇಶ್ರತ್ ಜಹಾನ್ ಎನ್‌ಕೌಂಟರ್‌ಗೆ ಸಂಬಂಧಿಸಿದ ಪ್ರಕರಣವನ್ನು ಮೆಟ್ರೊಪಾಲಿಟನ್‌ ಕೋರ್ಟ್‌ ಮುಕ್ತಾಯಗೊಳಿಸಿದೆ.

ಗುಪ್ತದಳದ ಮಾಜಿ ವಿಶೇಷ ನಿರ್ದೇಶಕ ರಾಜಿಂದರ್ ಕುಮಾರ್‌ ಸೇರಿದಂತೆ ಇಬ್ಬರು ಅಧಿಕಾರಿಗಳು ತಮಗೆ ನೀಡಲಾಗಿದ್ದ ಸಮನ್ಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇದಕ್ಕೂ ಮೊದಲು ಕೋರ್ಟ್‌ ಮಾನ್ಯ ಮಾಡಿತು. ಅವರ ವಿರುದ್ಧ ದಾಖಲಿಸಿದ್ದ ಆರೋಪಪಟ್ಟಿ ಅನುಸಾರ ಇಬ್ಬರ ವಿರುದ್ಧವೂ ಸಮನ್ಸ್ ಜಾರಿಗೊಂಡಿತ್ತು.

ತಮ್ಮ ಕೇಡರ್‌ನ ಅಧಿಕಾರಿಗಳು ನಿಯಂತ್ರಣಕ್ಕೆ ಒಳಪಡುವ ಕೇಂದ್ರ ಗೃಹ ಸಚಿವಾಲಯವು ತಮ್ಮನ್ನು ಶಿಕ್ಷಿಸಲು ಸಿಬಿಐಗೆ ಅನುಮತಿ ನಿರಾಕರಿಸಿದೆ. ಹೀಗಾಗಿ, ತಮ್ಮ ವಿರುದ್ಧ ಸಮನ್ಸ್‌ ಜಾರಿಗೊಳಿಸಿರುವುದು ಕಾನೂನುಬಾಹಿರ ಎಂದು ಈ ಇಬ್ಬರು ಅಧಿಕಾರಿಗಳು ಅರ್ಜಿಯನ್ನು ಸಲ್ಲಿಸಿದ್ದರು.

ADVERTISEMENT

‘ಕೋರ್ಟ್‌ ಇಬ್ಬರೂ ಆರೋಪಿ ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿತು ಹಾಗೂ ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿತು’ ಎಂದು ಸಿಬಿಐನ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್‌.ಸಿ.ಕೊಡೆಕರ್‌ ಅವರು ತಿಳಿಸಿದರು.

ಈ ಮೂಲಕ ಆರೋಪಿಗಳಾಗಿದ್ದ ಎಲ್ಲ ಏಳು ಮಂದಿ ಗುಜರಾತ್‌ನ ಪೊಲೀಸರು (ಒಬ್ಬರು ಮೃತಪಟ್ಟಿದ್ದಾರೆ), ಇಬ್ಬರು ಗುಪ್ತದಳದ ಅಧಿಕಾರಿಗಳನ್ನು ಪ್ರಕರಣದಿಂದ ಕೈಬಿಟ್ಟಂತಾಗಿದೆ.

ಏಳುಮಂದಿ ಪೊಲೀಸರಲ್ಲಿ ಮಾಜಿ ಡಿಜಿಪಿ ಪಿ.ಪಿ.ಪಾಂಡೆ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಮಾಜಿ ಐಪಿಎಸ್‌ ಅಧಿಕಾರಿ ಡಿ.ಜಿ.ವನ್‌ಜರ, ಮಾಜಿ ಎಸ್‌ಪಿ ಎನ್‌.ಕೆ.ಅಮಿನ್‌, ಐಜಿಪಿ ಜಿ.ಎಲ್.ಸಿಂಘಲ್‌, ಮಾಜಿ ಡಿವೈಎಸ್‌ಪಿ ತರುಣ್‌ ಬಾರೊಟ್, ಎಸ್‌ಆರ್‌ಪಿ ಕಮ್ಯಾಂಡೊ ಅನಜು ಚೌಧರಿ ಅವರ ವಿಚಾರಣೆಗೆ ಸರ್ಕಾರದ ಅನುಮತಿ ನಿರಾಕರಿಸಿದ್ದ ಕೈಬಿಡಲಾಗಿತ್ತು. ಇನ್ನೊಬ್ಬ ಆರೊಪಿ ಜೆ.ಜಿ.ಪರ್ಮರ್‌ ಕಳೆದ ವರ್ಷ ಮೃತಪಟ್ಟಿದ್ದರು. ‘ಎಲ್ಲ ಆದೇಶಗಳನ್ನು ತಾನು ಒಪ್ಪಲಿದ್ದು, ಪ್ರಶ್ನಿಸುವುದಿಲ್ಲ’ ಎಂದು ಸಿಬಿಐ ಕೋರ್ಟ್‌ಗೆ ಲಿಖಿತವಾಗಿ ತಿಳಿಸಿತು.

ಗುಜರಾತ್‌ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆದಿತ್ತು. 19 ವರ್ಷದ ಇಶ್ರತ್‌ ಜಹಾನ್‌, ಆಕೆಯ ಸ್ನೇಹಿತ ಪ್ರಾಣೇಶ್‌ ಪಿಳ್ಳೈ ಅಲಿಯಾಸ್‌ ಜಾವೇದ್‌ ಶೇಖ್‌ ಮತ್ತು ಪಾಕಿಸ್ತಾನದ ಪ್ರಜೆಗಳು ಎನ್ನಲಾದ ಅಮ್ಜದಾಲಿ ರಾಣಿ, ಜೀಶನ್‌ ಜೋಹರ್‌ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ರಾಜಿಂದರ್ ಕುಮಾರ್‌ ಈ ಎನ್‌ಕೌಂಟರ್‌ ನೇತೃತ್ವ ವಹಿಸಿದ್ದರು. ಪ್ರಕರಣ ಕೈಬಿಡುವ ತೀರ್ಮಾನ ಕೈಗೊಂಡಿದ್ದ ಸೆಷನ್ಸ್‌ ಕೋರ್ಟ್‌, ‘ಅವರು ಉಗ್ರರಲ್ಲ ಎಂದು ನಿರೂಪಿಸಲು ಅಗತ್ಯ ಸಾಕ್ಷ್ಯಗಳಿಲ್ಲ. ನಕಲಿ ಎನ್‌ಕೌಂಟರ್‌ ಪ್ರಶ್ನೆ ಮೂಡುವುದಿಲ್ಲ‘ ಎಂದಿತ್ತು.

ಗುಪ್ತದಳದ (ಐಬಿ)ಇಬ್ಬರು ಅಧಿಕಾರಿಗಳ ವಿರುದ್ಧ ಮೆಟ್ರೊಪಾಲಿಟಿನ್ ಕೋರ್ಟ್‌ನಲ್ಲಿ 2014 ಫೆಬ್ರುವರಿ ತಿಂಗಳು ಸಿಬಿಐ ಆರೋಪಪಟ್ಟಿ ದಾಖಲಿಸಿತ್ತು. ಆದರೆ, ಈ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಸಿಬಿಐಗೆ ಗೃಹ ಸಚಿವಾಲಯ ಅನುಮತಿ ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.