ಜೈಪುರ: ಪುಲ್ವಾಮಾ ದಾಳಿ ವಿವಾದ ಕುರಿತಂತೆ ಕೇಂದ್ರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್, ‘2019ರ ಲೋಕಸಭೆ ಚುನಾವಣೆಯ ಹೋರಾಟ ಯೋಧರ ಹೆಣದ ಮೇಲೆ ನಡೆಯಿತು’ ಎಂದಿದ್ದಾರೆ.
ಈ ಪ್ರಕರಣ ಕುರಿತು ತನಿಖೆ ನಡೆಯಬೇಕಾಗಿತ್ತು ಹಾಗೂ ಆ ಸಂದರ್ಭದಲ್ಲಿ ಕೇಂದ್ರದ ಗೃಹ ಸಚಿವರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದೂ ಮಲಿಕ್ ಅಭಿಪ್ರಾಯಪಟ್ಟರು. ‘ದಾಳಿ ಕೃತ್ಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಮಾಹಿತಿ ನೀಡಿದ್ದೆ. ಆಗ ಪ್ರಧಾನಿ ಅವರು ‘ಈಗ ಮೌನವಾಗಿ ಇರುವಂತೆ‘ ಪ್ರತಿಕ್ರಿಯಿಸಿದ್ದರು’ ಎಂದು ತಿಳಿಸಿದರು.
‘ಯೋಧರ ಹೆಣದ ಮೇಲೆ 2019ರ ಲೋಕಸಭೆ ಚುನಾವಣೆ ಎದುರಿಸಲಾಯಿತು. ದಾಳಿ ಕೃತ್ಯ ಕುರಿತಂತೆ ಯಾವುದೇ ತನಿಖೆ ನಡೆಯಲಿಲ್ಲ. ತನಿಖೆ ನಡೆಸಿದ್ದರೆ ಆಗಿನ ಗೃಹ ಸಚಿವ (ರಾಜನಾಥ್ ಸಿಂಗ್) ರಾಜೀನಾಮೆ ನೀಡಬೇಕಿತ್ತು. ಹಲವರು ಜೈಲಿಗೆ ಹೋಗುತ್ತಿದ್ದರು. ದೊಡ್ಡ ವಿವಾದವೇ ಆಗಿರುತ್ತಿತ್ತು’ ಎಂದು ಮಲ್ಲಿಕ್ ಅವರು ಆಳ್ವಾರ್ ಜಿಲ್ಲೆಯ ಬನ್ಸುರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೊದಲು ಮಲಿಕ್ ಆ ರಾಜ್ಯದ ರಾಜ್ಯಪಾಲರಾಗಿದ್ದರು.
ಫೆಬ್ರುವರಿ 14, 2019ರಲ್ಲಿ ಪುಲ್ವಾಮಾ ದಾಳಿ ಕೃತ್ಯ ನಡೆದಾಗ, ಪ್ರಧಾನಿ ಅವರು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು. ಅಲ್ಲಿಂದ ಹೊರಬಂದಾಗ ನನಗೆ ಅವರಿಂದ ಕರೆ ಬಂತು. ಆಗ ‘ನಮ್ಮ ತಪ್ಪಿನಿಂದಾಗಿ ಯೋಧರ ಹತ್ಯೆಯಾಗಿದೆ’ ಎಂದು ಮಾಹಿತಿ ನೀಡಿದೆ. ಅದಕ್ಕವರು ‘ಈಗ ಮೌನವಾಗಿರುವಂತೆ’ ತಿಳಿಸಿದರು ಎಂದು ಪ್ರತಿಕ್ರಿಯಿಸಿದರು.
ಇತ್ತೀಚೆಗೆ ಮಲಿಕ್ ಅವರು, ತಾವು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಆಗಸ್ಟ್ 23, 2018 ಮತ್ತು ಅಕ್ಟೋಬರ್ 30, 2019ರ ಅವಧಿಯಲ್ಲಿ ವಿಮಾ ಯೋಜನೆಗೆ ಸಂಬಂಧಿತ ಕಡತ ವಿಲೇವಾರಿ ಮಾಡಲು ₹ 300 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಆರೋಪಿಸಿದ್ದರು. ಈ ಸಂಬಂಧ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.