ADVERTISEMENT

2020ಕ್ಕೆ ಬಿಎಸ್‌–6: ಮಹತ್ವದ ನಿರ್ಧಾರ

ಡೀಸೆಲ್‌ ವಾಹನಗಳ ಮಾಲಿನ್ಯ ಪೆಟ್ರೋಲ್‌ ವಾಹನಗಳಿಗೆ ಸಮಾನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2016, 19:30 IST
Last Updated 7 ಜನವರಿ 2016, 19:30 IST

ನವದೆಹಲಿ (ಪಿಟಿಐ): ಮೋಟಾರು ವಾಹನಗಳ ವಾಯುಮಾಲಿನ್ಯ ನಿಯಂತ್ರಣ ಪರಿಮಾಣ ಭಾರತ್‌ ಸ್ಟೇಜ್–6 (ಬಿಎಸ್‌–6) ಅನ್ನು 2020ರ ವೇಳೆಗೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಅತ್ಯಂತ ಮಹತ್ವದ್ದು ಎಂದು ದೆಹಲಿಯ  ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಅಭಿಪ್ರಾಯಪಟ್ಟಿದೆ.

ಬಿಎಸ್‌–6 ಪರಿಮಾಣಕ್ಕೆ ಅನುಗುಣವಾಗಿರುವ ಕಾರುಗಳು ಬಿಎಸ್‌–4 ಕಾರುಗಳಿಗಿಂತ ಶೇ 68ರಷ್ಟು ಕಡಿಮೆ ವಿಷಕಾರಿ ಅನಿಲಗಳನ್ನು ಉಗುಳುತ್ತವೆ ಎಂದು ಸಿಎಸ್‌ಇ ತಿಳಿಸಿದೆ. ಇನ್ನು ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲಿನ ವಾಹನಗಳ ಸಂಖ್ಯೆ ಈಗಿನದಕ್ಕಿಂತ ದುಪ್ಪಟ್ಟಾಗಿರುತ್ತದೆ. ಹೀಗಾಗಿ ವಾಯುಮಾಲಿನ್ಯ ನಿಯಂತ್ರಣ ಕ್ರಮಗಳಲ್ಲಿ ಕೇಂದ್ರ ಸರ್ಕಾರದ ಈ ಹೆಜ್ಜೆ ಮಹತ್ವದ ನಿರ್ಧಾರ ಎಂದು ಸಿಎಸ್‌ಇ ಅಭಿಪ್ರಾಯಪಟ್ಟಿದೆ. 

ಬಿಎಸ್‌–6 ಪರಿಮಾಣವನ್ನು ಅನುಸರಿಸಲು ವಾಹನಗಳ ಎಂಜಿನ್ ಮತ್ತು ಎಗ್ಸಾಸ್ಟ್ (ಹೊಗೆ ಉಗುಳುವ ವ್ಯವಸ್ಥೆ) ವ್ಯವಸ್ಥೆಯಲ್ಲಿ ಗಣನೀಯವಾದ ಬದಲಾವಣೆ ಮಾಡಬೇಕಾಗುತ್ತದೆ. ಬಿಎಸ್‌–6ಗೆ ಅನುಗುಣವಾದ ಎಂಜಿನ್ ಅಭಿವೃದ್ಧಿ ಪಡಿಸಲು ವಾಹನ ತಯಾರಿಕಾ ಸಂಸ್ಥೆಗಳಿಗೆ ಇನ್ನೂ ಆರು ವರ್ಷಗಳ ಕಾಲಾವಕಾಶ ಇದೆ.

ಸರ್ಕಾರದ ಈ ಕ್ರಮಕ್ಕೆ ವಾಹನ ತಯಾರಕರು ಅಡ್ಡಗಾಲು ಹಾಕದಿದ್ದರೆ ವಾಯುಮಾಲಿನ್ಯದ ಪ್ರಮಾಣವನ್ನು ತ್ವರಿತವಾಗಿ ಕಡಿಮೆ ಮಾಡಬಹುದು ಎಂದು ಸಿಎಸ್‌ಇ ಹೇಳಿದೆ. ಜತೆಗೆ ಈ ಪರಿಮಾಣವನ್ನು ಅನುಸರಿಸಲು ಇಂಧನದ ಗುಣಮಟ್ಟವೂ ಹೆಚ್ಚಿರಬೇಕು. ಗುಣಮಟ್ಟದ ಇಂಧನ ಪೂರೈಸಲು ತೈಲ ಶುದ್ಧೀಕರಣ ಘಟಕಗಳನ್ನು ಭಾರಿ ಪ್ರಮಾಣದಲ್ಲಿ ಮೇಲ್ದರ್ಜೆಗೆ ಏರಿಸಬೇಕಾಗಿದೆ.

ಇದಕ್ಕೆ ಸುಮಾರು ₹ 28,750 ಕೋಟಿ ವೆಚ್ಚ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಒಪ್ಪಿಗೆ ಸೂಚಿಸಿವೆ. ಈಗ ದೆಹಲಿ ಸೇರಿದಂತೆ 13 ನಗರಗಳಲ್ಲಿ ಮಾತ್ರ ಬಿಎಸ್‌–4 ಜಾರಿಯಲ್ಲಿದೆ. 2016ರ ಮಾರ್ಚ್‌ನಲ್ಲಿ ದೇಶದಾದ್ಯಂತ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.