ADVERTISEMENT

ಮರುಬಳಕೆ ರಾಕೆಟ್‌ ಲ್ಯಾಂಡಿಂಗ್‌: ಚಿತ್ರದುರ್ಗ ಇಳಿದಾಣದಲ್ಲಿ ಇಸ್ರೊ ಸಿದ್ಧತೆ

ಮಾರ್ಚ್‌ ಮಧ್ಯೆ 36 ಉಪಗ್ರಹಗಳು ಕಕ್ಷೆಗೆ: ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌

ಏಜೆನ್ಸೀಸ್
Published 10 ಫೆಬ್ರುವರಿ 2023, 16:09 IST
Last Updated 10 ಫೆಬ್ರುವರಿ 2023, 16:09 IST
ಎಸ್‌. ಸೋಮನಾಥ್‌
ಎಸ್‌. ಸೋಮನಾಥ್‌   

ಶ್ರೀಹರಿಕೋಟಾ (ಆಂಧ್ರಪ್ರದೇಶ): ‘ಮರುಬಳಕೆ ಮಾಡಬಹುದಾದ ಉಡಾವಣಾ ವಾಹಕವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸುವ ಪ್ರಾತ್ಯಕ್ಷಿಕೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಮರುಬಳಕೆ ರಾಕೆಟ್‌ಗಳ ಇಳಿದಾಣದಲ್ಲಿ ಯೋಜನೆ ಸಂಬಂಧಿತ ಕೆಲಸಗಳಲ್ಲಿ ನಮ್ಮ ತಂಡಗಳು ತೊಡಗಿವೆ’ ಎಂದು ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ಶುಕ್ರವಾರ ತಿಳಿಸಿದರು.

‘ಆರಂಭಿಕ ಸಿದ್ಧತೆಗಳು ಕೆಲವೇ ದಿನಗಳಲ್ಲಿ ಪೂರ್ಣವಾಗಲಿವೆ. ನಂತರ ಲ್ಯಾಂಡಿಂಗ್‌ ಪ್ರಾತ್ಯಕ್ಷಿಕೆ ನಡೆಸಲು ಸಾಧ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ವಿ ಡಿ2 ಯಶಸ್ವಿ ಉಡಾವಣೆಯ ನಂತರ ಇಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ನಾವು, ಮುಂದಿನ ಉಡಾವಣೆಗಾಗಿ ಜಿಎಸ್ಎಲ್‌ವಿ ಎಂಕೆ3 ಉಡಾವಣಾ ವಾಹಕ ಸಜ್ಜುಗೊಳಿಸುತ್ತಿದ್ದೇವೆ. ಇದು ಒನ್‌ವೆಬ್‌ ಇಂಡಿಯಾ –2 ಜತೆಗೆ 36 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡುವ ಎಲ್‌ವಿಎಂ 3ಎಂ3 ಕಾರ್ಯಕ್ರಮದ ಭಾಗವಾಗಿದೆ. ಈ ಉಡಾವಣೆ ಮಾರ್ಚ್‌ ಮಧ್ಯೆ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

ಎಸ್‌ಎಸ್‌ಎಲ್‌ವಿ ಉಡಾವಣೆ ಮಾಡಿದ ಬೆನ್ನಲ್ಲೇ ಇಸ್ರೊ, ಪಿಎಸ್‌ಎಲ್‌‌ವಿ ಸಿ 55 ಮಿಷನ್ ಉಡಾವಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ವಾಣಿಜ್ಯ ಉದ್ದೇಶದ ಈ ಉಡಾವಣೆಯನ್ನು ನ್ಯೂ ಸ್ಪೇಸ್ ಇಂಡಿಯಾ ಲಿಮ್ಡ್‌ಗಾಗಿ (ಎನ್‌ಎಸ್‌ಐಎಲ್‌) ನಡೆಸಲಾಗುತ್ತಿದೆ. ಇದು ಬಹುಶಃ ಮಾರ್ಚ್ ಅಂತ್ಯದ ವೇಳೆಗೆ ನೆರವೇರಲಿದೆ. ಉಡಾವಣಾ ಕೇಂದ್ರದ ಹೊಸ ಸೌಲಭ್ಯದ ನೆಲೆಯಲ್ಲಿ ರಾಕೆಟ್‌ ಇರಿಸುವ ಮೂಲಕ ಉಡಾವಣಾ ಕಾರ್ಯಕ್ರಮ ಶುಕ್ರವಾರವೇ ಪ್ರಾರಂಭಿಸಲಾಗಿದೆ ಎಂದರು.

ನಿಸಾರ್ (ನಾಸಾ-ಇಸ್ರೊ ಎಸ್ಎಆರ್ ಮಿಷನ್) ಉಡಾವಣೆ ವರ್ಷದ ಅಂತ್ಯದ ವೇಳೆಗೆ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಇಸ್ರೊ ಈ ವರ್ಷದಲ್ಲಿ ಹಲವು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ. ಜತೆಗೆ ಮಾನವ ಸಹಿತ ‘ಗಗನಯಾನ’ ಕಾರ್ಯಕ್ರಮಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದೆ ಎಂದರು.

ಇಸ್ರೊ ಪ್ರಕಾರ, ಮೂವರು ಗಗನಯಾತ್ರಿಗಳನ್ನು ನೌಕೆಯಲ್ಲಿ 400 ಕಿ.ಮೀ ಅಂತರದ ಕಕ್ಷೆಗೆ ಕೊಂಡೊಯ್ದು ಮತ್ತೆ ಭೂಮಿಗೆ ಸುರಕ್ಷಿತವಾಗಿ ವಾಪಸ್‌ ಕರೆತಂದು ಭಾರತದ ಸಮುದ್ರದಲ್ಲಿ ಇಳಿಸುವ ಉದ್ದೇಶವನ್ನು 3 ದಿನಗಳ ‘ಗಗನಯಾನ’ ಯೋಜನೆ ಹೊಂದಿದೆ.

‘ಈ ವರ್ಷವಿಡಿ ಇಸ್ರೊದಲ್ಲಿ ಗಗನಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿವೆ. ನೌಕೆಯ ಪರೀಕ್ಷಾ ಹಾರಾಟ, ಪರೀಕ್ಷಾ ವಾಹಕದ ಕಾರ್ಯಾಚರಣೆ ಜತೆಗೆ, ಪುನಶ್ಚೇತನ ಸಾಮರ್ಥ್ಯದ ಮಾಡ್ಯುಲ್‌ ಪ್ರಾತ್ಯಕ್ಷಿಕೆ ನಡೆಯಬೇಕು. ಇವೆಲ್ಲವೂ ಯಶಸ್ವಿಯಾದ ನಂತರ ಇನ್ನೊಂದು ಗಗನನೌಕೆ ಉಡಾವಣೆ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳು ಯಶಸ್ವಿಯಾದ ನಂತರ ಮಾನವ ರಹಿತ ಬಾಹ್ಯಾಕಾಶ ಕಾರ್ಯಕ್ರಮ ಕೈಗೊಳ್ಳುತ್ತೇವೆ’ ಎಂದು ಸೋಮನಾಥ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.