ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಭಾಷಾಂತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲೇಖಕ ಕೆ.ಕೆ.ಗಂಗಾಧರನ್ ಅವರ ‘ಮಲಯಾಳಂ ಕಥೆಗಳು’ ಕೃತಿ ಆಯ್ಕೆಯಾಗಿದೆ.
ಮಲಯಾಳಂ ಭಾಷೆಯ ವಿವಿಧ ಲೇಖಕರ ಸಣ್ಣ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಈ ಕೃತಿ ರಚಿಸಿದ್ದಾರೆ. ಇದೂ ಸೇರಿದಂತೆ ಅಕಾಡೆಮಿಯು ವಿವಿಧ ಭಾಷೆಗಳ 24 ಕೃತಿಗಳಿಗೆ ‘ಭಾಷಾಂತರ ಪ್ರಶಸ್ತಿ’ಯನ್ನು ಸೋಮವಾರ ಪ್ರಕಟಿಸಿದೆ.
ಲೇಖಕಿ ಸುಧಾಮೂರ್ತಿ ಅವರ ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕತೆಗಳು’ ಕೃತಿಯನ್ನು ಲೇಖಕಿ ನಾಗರತ್ನ ಹೆಗ್ಡೆ ಅವರು ಸಂಸ್ಕೃತಕ್ಕೆ ಭಾಷಾಂತರಿಸಿದ್ದು, ‘ರುಚಿರಾಹ್ ಬಾಲಕಥಾ’ ಕೃತಿಗೆ ಸಂಸ್ಕೃತ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಸಾಹಿತಿ ಕೋಟ ಶಿವರಾಮ ಕಾರಂತ ಅವರ ‘ಚೋಮನದುಡಿ’ ಕೃತಿಯನ್ನು ಕಾಶ್ಮೀರಿ ಭಾಷೆಗೆ ಗುಲ್ಜಾರ್ ಅಹ್ಮದ್ ರಥೇರ್ ಅವರು ‘ಚೂಮ ಸುಂಡ್ ಡೋಲ್’ ಹೆಸರಿನಲ್ಲಿ ಭಾಷಾಂತರಿಸಿದ್ದು, ಈ ಕೃತಿಗೆ ಕಾಶ್ಮೀರಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ಒಟ್ಟು ₹ 50 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ವಿಮರ್ಶಕಿ ಎಂ.ಎಸ್.ಆಶಾದೇವಿ, ಕಥೆಗಾರ ಕೇಶವ ಮಳಗಿ ಮತ್ತು ಪ್ರೊ.ಎಸ್.ಸಿರಾಜ್ ಅಹ್ಮದ್ ಇದ್ದರು.‘
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.