ನವದೆಹಲಿ: ಸಂಸತ್ ಭವನ ಭದ್ರತಾ ಲೋಪ ಪ್ರಕರಣದ ಆರು ಆರೋಪಿಗಳನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾನೂನಿನಡಿ (ಯುಎಪಿಎ) ವಿಚಾರಣೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಅನುಮತಿ ನೀಡಿದ್ದಾರೆ ಎಂದು ರಾಜ್ ನಿವಾಸದ (ರಾಜ್ಯಪಾಲರ ನಿವಾಸ) ಅಧಿಕಾರಿಗಳು ತಿಳಿಸಿದ್ದಾರೆ.
‘ಆರೋಪಿಗಳ ಬಗ್ಗೆ ಅಗತ್ಯ ಪುರಾವೆಗಳು ಇರುವುದರಿಂದ ಯುಎಪಿಎ ಕಾಯ್ದೆಯ ಸೆಕ್ಷನ್ 16 ಹಾಗೂ 18ರಡಿಯಲ್ಲಿ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ದೆಹಲಿ ಪೊಲೀಸರು ಪ್ರಾಸಿಕ್ಯೂಷನ್ ಅನ್ನು ವಿನಂತಿಸಿದ್ದರು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಯುಎಪಿಎ ಅಡಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಪ್ರಾಸಿಕ್ಯೂಷನ್ ಅನ್ನು ದೆಹಲಿ ಪೊಲೀಸರು ವಿನಂತಿಸಿಕೊಂಡಿದ್ದರು. ಈ ವರ್ಷ ಮೇ 30 ರಂದು ಪರಿಶೀಲನಾ ಸಮಿತಿ, ತನಿಖಾ ಸಂಸ್ಥೆಯು ಸಂಗ್ರಹಿಸಿದ ಸಂಪೂರ್ಣ ಸಾಕ್ಷ್ಯವನ್ನು ಪರಿಶೀಲಿಸಿದೆ. ಪ್ರಕರಣದಲ್ಲಿ ಆರೋಪಿಗಳ ಶಾಮೀಲು ಕಂಡುಬಂದಿದೆ’ ಎಂದು ರಾಜ್ ನಿವಾಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 13ರಂದು ಸಂಸತ್‌ಗೆ ನುಗ್ಗಿದ್ದ ಇಬ್ಬರು ಆಗಂತುಕರು ಲೋಕಸಭೆ ಹಾಲ್‌ಗೆ ಜಿಗಿದು ಸ್ಮೋಕ್ ಕ್ಯಾನ್‌ಗಳನ್ನು ಹಾರಿಸಿದ್ದರು. ಘಟನೆ ಸಂಬಂಧ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೊಲ್ ಧನರಾಜ್ ಶಿಂದೆ, ನೀಲಮ್ ರನೋಲಿಯಾ, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.