ADVERTISEMENT

LS Polls | ಸಂವಿಧಾನ ಬದಲಿಸುವವರ, ಉಳಿಸುವವರ ನಡುವಿನ ಚುನಾವಣೆಯಾಗಿದೆ: ಅಖಿಲೇಶ್

ಪಿಟಿಐ
Published 12 ಮೇ 2024, 13:02 IST
Last Updated 12 ಮೇ 2024, 13:02 IST
<div class="paragraphs"><p>ಎಸ್‌ಪಿ ನಾಯಕ ಅಖಿಲೇಶ್ ಯಾದವ್</p></div>

ಎಸ್‌ಪಿ ನಾಯಕ ಅಖಿಲೇಶ್ ಯಾದವ್

   

ಬಾರಾಬಂಕಿ (ಉತ್ತರ ಪ್ರದೇಶ): ಈ ಬಾರಿಯ ಲೋಕಸಭೆ ಚುನಾವಣೆಯು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವ ಜನರು ಮತ್ತು ಅದನ್ನು ರಕ್ಷಿಸುವವರ ನಡುವಿನ ಚುನಾವಣೆಯಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಬಾರಾಬಂಕಿ ಲೋಕಸಭಾ ಕ್ಷೇತ್ರದ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿ ತನುಜ್‌ ಪುನಿಯಾ ಪರವಾಗಿ ಮತಯಾಚಿಸಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಂದೆಡೆ ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವ ಜನರಿದ್ದಾರೆ ಹಾಗೂ ಮತ್ತೊಂದೆಡೆ ಅದನ್ನು ರಕ್ಷಿಸಲು ಬಯಸುತ್ತಿರುವ ‘ಇಂಡಿಯಾ’ ಮೈತ್ರಿಕೂಟ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಇದೆ. ಈ ಚುನಾವಣೆಯು ಬಾರಾಬಂಕಿ ಜನರು ಮತ್ತು ಸುಳ್ಳು ಭರವಸೆಗಳ ನಡುವಿನ ಚುನಾವಣೆಯಾಗಿ ಮಾರ್ಪಟ್ಟಿದೆ’ ಎಂದು ಹೇಳಿದರು.

ADVERTISEMENT

ಹಣದುಬ್ಬರ ವಿಷಯದ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಾದವ್‌, ‘ಬಡ ರೈತರ ಭೂಮಿಯನ್ನು ಕಸಿದುಕೊಂಡು ದೊಡ್ಡ ಕೈಗಾರಿಕೋದ್ಯಮಿಗಳಿಗೆ ನೀಡುವ ಸಲುವಾಗಿ ಬಿಜೆಪಿ ಸರ್ಕಾರ ಕೃಷಿ ಕಾನೂನುಗಳನ್ನು ತಂದಿದೆ. ಅಲ್ಲದೆ ದೇಶದ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪೊಲೀಸರ ಉದ್ಯೋಗವನ್ನು ತಾತ್ಕಾಲಿಕಗೊಳಿಸುತ್ತದೆ’ ಎಂದು ಹೇಳಿದರು.

‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸುತ್ತದೆ. ಬಡವರಿಗೆ ನೀಡುತ್ತಿರುವ ಉಚಿತ ಪಡಿತರದ ಗುಣಮಟ್ಟವನ್ನು ಉತ್ತಮಪಡಿಸಲಿದೆ ಎಂದು ತಿಳಿಸಿದರು.

‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿ ತನುಜ್‌ ಪುನಿಯಾ ಅವರಿಗೆ ಬಿಜೆಪಿ ಅಭ್ಯರ್ಥಿ ರಾಜ್‌ರಾಣಿ ರಾವತ್‌ ಪೈಪೋಟಿ ನೀಡಲಿದ್ದಾರೆ. ಬಾರಾಬಂಕಿಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.