ನವದೆಹಲಿ: ‘ಜಾತ್ಯತೀತ ಪ್ರಜಾಪ್ರಭುತ್ವದ ಭವಿಷ್ಯ ಆತಂಕದಲ್ಲಿದ್ದು, 2024ರ ಲೋಕಸಭೆ ಚುನಾವಣೆ ನಿರ್ಣಾಯಕವಾಗಿರಲಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ’ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದರು.
ಪಿಟಿಐ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆಯು ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪ್ರಭಾವ ಬೀರಲಿದೆ ಎನ್ನುವ ಅಭಿಪ್ರಾಯವನ್ನು ತಳ್ಳಿಹಾಕಿದರು. ಅಲ್ಲದೆ ಬಿಜೆಪಿಯ ರಾಮನಿಗೂ, ದೇಶನ ಜನ ನಂಬಿರುವ ರಾಮನಿಗೂ ವ್ಯತ್ಯಾಸವಿದೆ ಎಂದು ಅವರು ಹೇಳಿದರು.
ಚುನಾವಣೆ ಲಾಭಕ್ಕಾಗಿ ಬಿಜೆಪಿ ಬಿಂಬಿಸಿರುವ ‘ಮೋದಿ ಕಿ ಗ್ಯಾರಂಟಿ’ ಘೋಷವಾಕ್ಯವು ‘ಜುಮ್ಲಾ’ ಎಂದು ಅವರು ಟೀಕಿಸಿದರು.
ಕಪ್ಪು ಹಣವನ್ನು ಮರಳಿ ತರಲು, ಹಣದುಬ್ಬರ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಅವರು ನುಡಿದರು.
‘ಕಳೆದ 10 ವರ್ಷಗಳಲ್ಲಿ ದುರಂತ ಆಡಳಿತಕ್ಕೆ ನಾವು ಸಾಕ್ಷಿಯಾದೆವು. ಮೋದಿಯವರು ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂದು ಪ್ರತಿಪಾದಿಸಿದರು, ಆದರೆ ಆಡಳಿತವು ಕನಿಷ್ಠವಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂಸತ್ತು ನಿರುಪಯೋಗವಾಗುತ್ತಿದೆ’ ಎಂದರು.
ಕಳೆದ ಚಳಿಗಾಲದ ಅಧಿವೇಶನದಲ್ಲಿ 140ಕ್ಕೂ ಹೆಚ್ಚು ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಿರುವುದು ಹಿಂದೆಂದೂ ಕಂಡಿರದಂತಹ ನಿದರ್ಶನ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.